ಉಡುಪಿ : ನವಜಾತ ಶಿಶು ಅಕ್ರಮ ಮಾರಾಟ ಪ್ರಕರಣ; ವೈದ್ಯ ಸೇರಿ ಇಬ್ಬರು ಅರೆಸ್ಟ್‌

ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ.ಕೆ.ಸುರೇಂದ್ರ ಕಾಮತ್ (76 ವರ್ಷ) ಹಾಗೂ ನೇಜಾರು ಸಂತೆಕಟ್ಟೆಯ ರಾಜೀವನಗರ ನಿವಾಸಿ ಎಸ್. ಪ್ರಕಾಶ್ (50 ವರ್ಷ) ಎಂದು ಗುರುತಿಸಲಾಗಿದೆ.

ಉಡುಪಿ : ನವಜಾತ ಹೆಣ್ಣು ಮಗುವನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಸೇರಿ ಇಬ್ಬರನ್ನು ಉಡುಪಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಉಡುಪಿಯ ಕಾಮತ್ ನರ್ಸಿಂಗ್ ಹೋಮ್‌ನ ವೈದ್ಯ ಡಾ.ಕೆ.ಸುರೇಂದ್ರ ಕಾಮತ್ (76 ವರ್ಷ) ಹಾಗೂ ನೇಜಾರು ಸಂತೆಕಟ್ಟೆಯ ರಾಜೀವನಗರ ನಿವಾಸಿ ಎಸ್. ಪ್ರಕಾಶ್ (50 ವರ್ಷ) ಎಂದು ಗುರುತಿಸಲಾಗಿದೆ.

ಏನಿದು ನವಜಾತ ಶಿಶು ಮಾರಾಟ ಪ್ರಕರಣ ?

ಉಡುಪಿ ಜಿಲ್ಲೆಯ ಸಂತೆಕಟ್ಟೆ ನೇಜಾರಿನ ಪ್ರಕಾಶ್ ಮತ್ತು ಪೂರ್ಣಿಮಾ ದಂಪತಿ ಸುಮಾರು ಒಂದು ತಿಂಗಳ ಹೆಣ್ಣು ಮಗುವನ್ನು ಯಾವುದೇ ಕಾನೂನು ಬದ್ದ ದತ್ತು ಪ್ರಕ್ರಿಯೆ ಇಲ್ಲದೇ ಸಾಕುತ್ತಿದ್ದಾರೆ ಎಂಬ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಮಾಹಿತಿ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಸುಬ್ರಹ್ಮಣ್ಯ ನಗರದ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆಯಲ್ಲಿ ದಂಪತಿ, ಮಗು ಹಾಗೂ ಪೂರ್ಣಿಮಾ ಅವರ ಅಕ್ಕ ಲಕ್ಷ್ಮಿ ಮನೆಯಲ್ಲಿ ಇದ್ದರು.

Also Read : ಕೋಟ : ದೇವರ ದರ್ಶನ ಪಡೆದು ಮರಳುವಾಗ ದುರಂತ : ಕಾರು ಹರಿದು ಬ್ರಹ್ಮಾವರದ ವ್ಯಕ್ತಿ ಸಾ*ವು – Vedio

ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿವಾಹವಾಗಿ 11 ವರ್ಷಗಳಾದರೂ ಮಕ್ಕಳಾಗದ ಕಾರಣ ಪ್ರಕಾಶ್ ಮತ್ತು ಪೂರ್ಣಿಮಾ ಅವರು ಕಾಮತ್ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ತಿಳಿದುಬಂದಿದೆ.

ಈ ವೇಳೆ ಲಕ್ಷ್ಮಿ ಅವರ ಪರಿಚಯದ ಮೂಲಕ ಆಸ್ಪತ್ರೆಯಲ್ಲಿ ಮಗು ಇರುವ ಮಾಹಿತಿ ತಿಳಿದುಬಂದಿದ್ದು, ಬಳಿಕ ದಂಪತಿ ವೈದ್ಯ ಡಾ. ಸುರೇಂದ್ರ ಕಾಮತ್ ಅವರನ್ನು ಸಂಪರ್ಕಿಸಿ ಮಗುವನ್ನು ನೀಡುವಂತೆ ಕೋರಿದ್ದರು ಎನ್ನಲಾಗಿದೆ. ವೈದ್ಯರು ಸುಮಾರು ಒಂದು ತಿಂಗಳ ಹಿಂದೆ ಹೆಣ್ಣು ಮಗುವನ್ನು ದಂಪತಿಗೆ ನೀಡಿದ್ದು, ಮಗುವಿನ ಜನನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿ ಕೊಟ್ಟಿದ್ದರು.

ಬಳಿಕ ಆ ದಾಖಲೆಗಳ ಆಧಾರದ ಮೇಲೆ ಉಡುಪಿ ನಗರಸಭೆಯಿಂದ ಜನನ ಪ್ರಮಾಣಪತ್ರವನ್ನೂ ಪಡೆದುಕೊಳ್ಳಲಾಗಿತ್ತು. ಆದರೆ ಮಗುವಿನ ಜೈವಿಕ ಪೋಷಕರ ಕುರಿತು ಯಾವುದೇ ಮಾಹಿತಿ ದಂಪತಿಗೆ ತಿಳಿದಿರಲಿಲ್ಲ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

Also Read : ಉಡುಪಿ ಸಂತೆ ಮಾರ್ಕೆಟ್‌ನಲ್ಲಿ ಅಗ್ನಿ ಅವಘಡ: ಹಣ್ಣಿನ ಅಂಗಡಿ ಸಂಪೂರ್ಣ ಭಸ್ಮ, ಲಕ್ಷಾಂತರ ರೂ. ನಷ್ಟ!

ಪ್ರಾಥಮಿಕ ತನಿಖೆಯಲ್ಲಿ ಆರೋಪಿತರು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಒಳಸಂಚು ರೂಪಿಸಿ, ಮಗುವಿನ ಜನನ ಹಾಗೂ ಪೋಷಕರ ಹೆಸರಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ನವಜಾತ ಶಿಶುವನ್ನು ಅಕ್ರಮವಾಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಉಳಿದ ಇಬ್ಬರು ಆರೋಪಿಗಳ ಪತ್ತೆ ಮತ್ತು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಗುವಿನ ಮೂಲ ಹಾಗೂ ಈ ಅಕ್ರಮ ಜಾಲದ ಹಿಂದೆ ಇನ್ನಷ್ಟು ವ್ಯಕ್ತಿಗಳ ಕೈವಾಡವಿದೆಯೇ ಎಂಬ ಕುರಿತು ತನಿಖೆ ಮುಂದುವರಿದಿದೆ.

Udupi baby selling scam doctor arrest

Ashwath Acharya | ಅಶ್ವಥ್ ಆಚಾರ್ಯ

ನ್ಯೂಸ್‌ ನೆಕ್ಸ್ಟ್‌ನ ಹಿರಿಯ ವರದಿಗಾರರಾಗಿರುವ ಅಶ್ವಥ್‌ ಆಚಾರ್ಯ ಅವರು ಪತ್ರಕರ್ತರಾಗಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದಾರೆ. ಕರ್ನಾಟಕದ ಪ್ರಖ್ಯಾತ ಸುದ್ದಿವಾಹಿನಿ, ಕನ್ನಡ ಪ್ರತಿಷ್ಠಿತ ದಿನ ಪತ್ರಿಕೆಗಳಲ್ಲಿ ಹಾಗೂ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. More »

Related Stories