ಬಿಡದಿಯಲ್ಲಿ ಮತ್ತೆ ಪೋಸ್ಟರ್ ವಾರ್: ಎಚ್‌ಡಿಕೆ, ನಿಖಿಲ್ ವಿರುದ್ಧ ವ್ಯಂಗ್ಯ ಪೋಸ್ಟರ್

ಬಿಡದಿ ಟೌನ್‌ಶಿಪ್ ವಿವಾದದ ನಡುವೆಯೇ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ಮತ್ತೆ ವ್ಯಂಗ್ಯ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಜೆಡಿಎಸ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ.

ರಾಮನಗರ ಜಿಲ್ಲೆಯ ಬಿಡದಿ ಟೌನ್‌ಶಿಪ್ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ವಿವಾದದ ಬೆನ್ನಲ್ಲೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡ ವ್ಯಂಗ್ಯ ಪೋಸ್ಟರ್‌ಗಳು ಮತ್ತೆ ಕಾಣಿಸಿಕೊಂಡಿದ್ದು, ರಾಜಕೀಯ ವಾತಾವರಣ ಮತ್ತಷ್ಟು ಬಿಸಿಯಾಗಿದೆ.

ಕುಂಬಳಗೂಡು ಸಮೀಪದ ಎಕ್ಸ್‌ಪ್ರೆಸ್‌ವೇ ಮೇಲ್ಸೇತುವೆ ಗೋಡೆ ಮೇಲೆ ರಾತ್ರೋರಾತ್ರಿ ಈ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಪೋಸ್ಟರ್‌ಗಳಲ್ಲಿ ಸಂಭಾಷಣೆ ಮಾದರಿಯ ವ್ಯಂಗ್ಯ ಬರಹಗಳಿದ್ದು, ಪಂಚಾಯಿತಿಯಿಂದ ವಿಧಾನ ಪರಿಷತ್ ಚುನಾವಣೆವರೆಗೆ ಹಣದ ವಿಚಾರ ಹಾಗೂ ಭೂಮಿ ಸಂಬಂಧಿತ ವಿಷಯಗಳನ್ನು ಉಲ್ಲೇಖಿಸಲಾಗಿದೆ.

ಈ ಬೆಳವಣಿಗೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ನಾಯಕರು, ಇದರ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಸಹ ಇದೇ ರೀತಿಯ ಪೋಸ್ಟರ್ ಅಂಟಿಸಿದವರ ವಿರುದ್ಧ ದೂರು ನೀಡಲಾಗಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಈ ಬಾರಿಯೂ ಕ್ರಮ ಕೈಗೊಳ್ಳದಿದ್ದರೆ ತಾವೂ ಹಗಲಿನ ವೇಳೆಯೇ ಪ್ರತಿಭಟನಾ ರೂಪದಲ್ಲಿ ಪೋಸ್ಟರ್ ಅಂಟಿಸುವುದಾಗಿ ಜೆಡಿಎಸ್ ಎಚ್ಚರಿಕೆ ನೀಡಿದೆ. ಈ ಮೂಲಕ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.

ಮಾಜಿ ಶಾಸಕ ಎ. ಮಂಜುನಾಥ್ ಪ್ರತಿಕ್ರಿಯಿಸಿ, ರಾತ್ರಿಯ ವೇಳೆ ಕೆಲವರು ಬಂದು ತಮ್ಮ ಪಕ್ಷದ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಿ ತೆರಳುತ್ತಿದ್ದಾರೆ ಎಂದು ಆರೋಪಿಸಿದರು. ಇಂತಹ ಘಟನೆಗಳನ್ನು ತಡೆಯಲು ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ತಮ್ಮ ಕಾರ್ಯಕರ್ತರು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಕಚೇರಿ ಗೋಡೆಗಳ ಮೇಲೆಯೇ ಹಗಲಿನಲ್ಲಿ ಪೋಸ್ಟರ್ ಅಂಟಿಸುವ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಒಟ್ಟಾರೆ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ರಾಜಕೀಯ ವಾಕ್ಸಮರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಹೊಸದಾಗಿ ಕಾಣಿಸಿಕೊಂಡಿರುವ ಪೋಸ್ಟರ್‌ಗಳು ಈ ವಿವಾದಕ್ಕೆ ಮತ್ತಷ್ಟು ಕಾವು ನೀಡಿವೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories