ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕೃತ ಪಟ್ಟಿ ಹೊರಬಿದ್ದಿದ್ದು, ಕರಾವಳಿಯ ಮೂರೂ ಜಿಲ್ಲೆಗಳಿಗೆ ಅರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನ ಉಸ್ತುವಾರಿ ಸಚಿವರಾಗಿ ನೇಮಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಖಾದರ್ ನೇಮಕಗೊಂಡಿದ್ದಾರೆ.
ಸದ್ಯಕ್ಕೆ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಆಡಳಿತ ಹಳಿ ತಪ್ಪದಂತೆ ನೋಡಿಕೊಳ್ಳಲು ಸೀಮಿತ ಸಚಿವರಿಗೆ ತಲಾ ಎರಡರಿಂದ ಮೂರು ಜಿಲ್ಲೆಗಳ ಹೊಣೆಗಾರಿಕೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕರಾವಳಿಯ ಪ್ರಭಾವಿ ನಾಯಕ ಯು.ಟಿ. ಖಾದರ್ ಅವರಿಗೆ ಹೈಕಮಾಂಡ್ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ಬಂಪರ್ ಗಿಫ್ಟ್ ನೀಡಿದ್ದಾರೆ.
ವಿಧಾನಸಭೆಯ ಸಭಾಧ್ಯಕ್ಷ (ಸ್ಪೀಕರ್) ಸ್ಥಾನಕ್ಕೆ ರಾಜೀನಾಮೆ ನೀಡಿ, ಡಿ.ಕೆ.ಶಿ ಸಂಪುಟ ಸೇರಿರುವ ಯು.ಟಿ. ಖಾದರ್ ಅವರಿಗೆ ಕರಾವಳಿಯ ಮೂರೂ ಜಿಲ್ಲೆಗಳ ಜವಾಬ್ದಾರಿ ಸಿಕ್ಕಿರುವುದು ರಾಜಕೀಯವಾಗಿ ಭಾರಿ ಮಹತ್ವ ಪಡೆದುಕೊಂಡಿದೆ.
ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡ ಈ ಮೂರೂ ಕರಾವಳಿ ಜಿಲ್ಲೆಗಳ ಉಸ್ತುವಾರಿಯನ್ನು ಒಬ್ಬರೇ ಸಚಿವರಿಗೆ ನೀಡಿರುವುದು ಕರಾವಳಿ ಭಾಗದ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡುವ ಮುನ್ಸೂಚನೆಯಾಗಿದೆ.
ಸಂಪುಟ ವಿಸ್ತರಣೆ ಬಳಿಕ ಬದಲಾಗುತ್ತಾ ಚಿತ್ರಣ?
ಸದ್ಯದ ಮಾಹಿತಿ ಪ್ರಕಾರ, ಮುಂಬರುವ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುವುದು ಖಚಿತ. ಆ ವೇಳೆ ಹೊಸ ಸಚಿವರ ಸೇರ್ಪಡೆಯಾದರೆ ಈಗ ಹಂಚಿಕೆಯಾಗಿರುವ ಜಿಲ್ಲೆಗಳು ಅದಲು-ಬದಲಾಗಲಿವೆ.
ಇದೇ ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಪ್ರಶ್ನೆ. ಯು.ಟಿ. ಖಾದರ್ ಅವರಿಗೆ ಮೂರು ಜಿಲ್ಲೆಗಳ ದೊಡ್ಡ ಜವಾಬ್ದಾರಿ ಇರುವುದರಿಂದ, ಸಂಪುಟ ವಿಸ್ತರಣೆಯ ನಂತರ ಅವರು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯಾವ ಜಿಲ್ಲೆಯ ಉಸ್ತುವಾರಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.
Also Read: ಕರ್ನಾಟಕದಲ್ಲಿ ಮತ್ತೆ ಬೈಕ್ ಆ್ಯಂಬುಲೆನ್ಸ್ ಸೇವೆ: ಆರೋಗ್ಯ ಇಲಾಖೆಯ ಮಹತ್ವದ ಆದೇಶ
ಅಷ್ಟೇ ಅಲ್ಲ, ಬೆಂಗಳೂರು ನಗರ ಮತ್ತು ಹಾಸನ ಹೊಂದಿರುವ ಕೃಷ್ಣ ಬೈರೇಗೌಡ, ಮೈಸೂರು-ಚಾಮರಾಜನಗರ ಹೊಂದಿರುವ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಇತರೆ ಹಿರಿಯ ಸಚಿವರು ಯಾವ ಜಿಲ್ಲೆಯನ್ನು ಉಳಿಸಿಕೊಂಡು, ಯಾವುದನ್ನು ಬಿಟ್ಟುಕೊಡಲಿದ್ದಾರೆ ಎಂಬ ಚರ್ಚೆ ಸದ್ಯದಲ್ಲೇ ಶುರುವಾಗಲಿದೆ.
ಉಸ್ತುವಾರಿ ಸಚಿವರ ಕಂಪ್ಲೀಟ್ ಪಟ್ಟಿ:
ಡಾ. ಜಿ. ಪರಮೇಶ್ವರ – ತುಮಕೂರು, ಚಿತ್ರದುರ್ಗ
ಕೆ.ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ವಿಜಯನಗರ
ರಾಮಲಿಂಗರೆಡ್ಡಿ – ಬೆಂಗಳೂರು ದಕ್ಷಿಣ, ಮಂಡ್ಯ
ಯು.ಟಿ. ಖಾದರ್ – ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ
ಎಂ.ಬಿ. ಪಾಟೀಲ್ – ವಿಜಯಪುರ, ಬಾಗಲಕೋಟೆ
ಕೆ.ಜೆ. ಜಾರ್ಜ್ – ಚಿಕ್ಕಮಗಳೂರು, ದಾವಣಗೆರೆ
ಕೃಷ್ಣ ಬೈರೇಗೌಡ – ಬೆಂಗಳೂರು ನಗರ, ಹಾಸನ
ಈಶ್ವರ ಖಂಡ್ರೆ – ಬೀದರ್, ಗದಗ
ಸತೀಶ್ ಜಾರಕಿಹೊಳಿ – ಬೆಳಗಾವಿ, ಧಾರವಾಡ, ಹಾವೇರಿ
ಪ್ರಿಯಾಂಕ್ ಖರ್ಗೆ – ಕಲಬುರ್ಗಿ, ಯಾದಗಿರಿ
ಡಾ. ಶರಣಪ್ರಕಾಶ್ ಪಾಟೀಲ್ – ರಾಯಚೂರು, ಕೊಪ್ಪಳ
ಯತೀಂದ್ರ ಸಿದ್ದರಾಮಯ್ಯ – ಮೈಸೂರು, ಚಾಮರಾಜನಗರ
ಬೈರತಿ ಸುರೇಶ್ – ಕೋಲಾರ, ಚಿಕ್ಕಬಳ್ಳಾಪುರ
List of in-charge ministers out Three districts for UT Khader



