
ಬೆಂಗಳೂರು ನಗರದಲ್ಲಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಿರುವ ಸರ್ಕಾರ, ಪ್ರಮುಖ ರಸ್ತೆಗಳಲ್ಲಿ ಇರುವ ಫುಟ್ಪಾತ್ ಒತ್ತುವರಿಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಜುಲೈ 1ರವರೆಗೆ ಸ್ವಯಂಪ್ರೇರಿತವಾಗಿ ಅತಿಕ್ರಮಣ ತೆರವುಗೊಳಿಸಿಕೊಳ್ಳಲು ಅವಕಾಶ ನೀಡಲಾಗಿದ್ದು, ಬಳಿಕ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಲಿದೆ ಎಂದು ಜಿಬಿಎ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಸಿದ್ದಾರೆ.
ಜುಲೈ 1ರಿಂದ “ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ” ಆರಂಭವಾಗಲಿದ್ದು, ಮೊದಲ ಹಂತದಲ್ಲಿ ಸುಮಾರು 2 ಸಾವಿರ ಕಿಲೋಮೀಟರ್ ವ್ಯಾಪ್ತಿಯ ಆದ್ಯತಾ ರಸ್ತೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿರುವ ಅಂಗಡಿಗಳ ಸಾಮಗ್ರಿ, ನಾಮಫಲಕ ಹಾಗೂ ಇತರೆ ಅಡೆತಡೆಗಳನ್ನು ತೆರವುಗೊಳಿಸಲಾಗುತ್ತದೆ.
ನಗರದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿರುವುದರಲ್ಲಿ ಸುಮಾರು ಶೇ.30ರಷ್ಟು ಮಂದಿ ಪಾದಚಾರಿಗಳೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಫುಟ್ಪಾತ್ಗಳನ್ನು ಸಾರ್ವಜನಿಕರ ಸುರಕ್ಷಿತ ಬಳಕೆಗೆ ಮುಕ್ತಗೊಳಿಸುವುದು ಅತ್ಯಗತ್ಯ ಎಂದು ಸಚಿವರು ತಿಳಿಸಿದರು.
ಪಾದಚಾರಿ ಮಾರ್ಗಗಳಲ್ಲಿ ಕಂಡುಬರುವ ಹಾನಿಯನ್ನು ಸರಿಪಡಿಸಲು ಸುಮಾರು 70 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹಾಳಾಗಿರುವ ಸ್ಲ್ಯಾಬ್ಗಳು, ಕರ್ಬ್ಸ್ಟೋನ್ಗಳು ಹಾಗೂ ಎತ್ತರ-ತಗ್ಗು ಸಮಸ್ಯೆಗಳನ್ನು ವೈಜ್ಞಾನಿಕವಾಗಿ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ರಸ್ತೆ ಗುಂಡಿಗಳನ್ನು ಬಾಕ್ಸ್ ಕಟಿಂಗ್ ವಿಧಾನದಲ್ಲಿ ಶಾಶ್ವತವಾಗಿ ಮುಚ್ಚುವ ಕೆಲಸಕ್ಕೂ ಆದ್ಯತೆ ನೀಡಲಾಗಿದೆ.
ಫುಟ್ಪಾತ್ ಮೇಲೆ ವಾಹನ ನಿಲುಗಡೆಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ನಿಯಮ ಉಲ್ಲಂಘಿಸಿ ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ಯಾವುದೇ ವಿನಾಯಿತಿ ಇಲ್ಲದೆ ಟೋಯಿಂಗ್ ಮೂಲಕ ತೆರವುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಇದಲ್ಲದೆ, ರಸ್ತೆ ಬದಿಯಲ್ಲಿ ವಾರಸುದಾರರಿಲ್ಲದೆ ದೀರ್ಘಕಾಲ ನಿಂತಿರುವ ವಾಹನಗಳಿಗೆ ಜುಲೈ 1ರಿಂದ ನೋಟಿಸ್ ಅಂಟಿಸಲಾಗುತ್ತದೆ. ಏಳು ದಿನಗಳ ಬಳಿಕವೂ ವಾಹನಗಳನ್ನು ತೆರವುಗೊಳಿಸದಿದ್ದರೆ ಜುಲೈ 10ರಿಂದ ಟೋಯಿಂಗ್ ಮಾಡಿ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಸಿಗ್ನಲ್ಗಳಿಂದ 75 ಮೀಟರ್ ವ್ಯಾಪ್ತಿಯಲ್ಲಿ ಬಸ್ ಅಥವಾ ಇತರೆ ವಾಹನಗಳ ನಿಲುಗಡೆಯನ್ನು ನಿಯಂತ್ರಿಸುವ ಕುರಿತು ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ಫುಟ್ಪಾತ್ಗಳು ಸಾರ್ವಜನಿಕರ ಹಕ್ಕಾಗಿದ್ದು, ಎಲ್ಲರೂ ನ್ಯಾಯಾಲಯದ ನಿರ್ದೇಶನವನ್ನು ಗೌರವಿಸಿ ಒತ್ತುವರಿ ತೆರವುಗೊಳಿಸಲು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.



