ಬೆಂಗಳೂರು 2ನೇ ಏರ್ ಪೋರ್ಟ್ ಗೆ ಅಂತಿಮ ಹಂತದ ಕಸರತ್ತು ಆರಂಭ! ಬಿಗ್ ಅಪ್ ಡೇಟ್

ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕನಕಪುರ ರಸ್ತೆ ಹಾಗೂ ನೆಲಮಂಗಲ ಭಾಗದ ಸ್ಥಳಗಳ ಪರಿಶೀಲನೆ ಮುಂದುವರಿದಿದ್ದು ಕಡಿಮೆ ಭೂಸ್ವಾಧೀನ ಮತ್ತು ಗ್ರಾಮಗಳ ಸ್ಥಳಾಂತರವಾಗುವ ಪ್ರದೇಶಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ.

ರಾಜಧಾನಿ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಯೋಜನೆಗೆ ಮತ್ತೆ ವೇಗ ಸಿಕ್ಕಿದೆ. ಈ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕನಕಪುರ ರಸ್ತೆ ಮತ್ತು ನೆಲಮಂಗಲ ಕುಣಿಗಲ್ ರಸ್ತೆ ಭಾಗದಲ್ಲಿರುವ ಗುರುತಿಸಲಾದ ಸ್ಥಳಗಳ ಕುರಿತು ಸರ್ಕಾರ ಸವಿಸ್ತಾರ ಚರ್ಚೆ ನಡೆಸಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ಗುರುತಿಸಲಾದ ಚೂಡಹಳ್ಳಿ, ಸೋಮನಹಳ್ಳಿ ಹಾಗೂ ನೆಲಮಂಗಲ ಕುಣಿಗಲ್ ರಸ್ತೆ ಭಾಗದ ಸ್ಥಳಗಳ ಕಾರ್ಯಸಾಧ್ಯತೆ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಈ ಸ್ಥಳಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸಾಧ್ಯತೆಗಳ ಬಗ್ಗೆ ಮತ್ತಷ್ಟು ತಾಂತ್ರಿಕ ಅಧ್ಯಯನ ನಡೆಸಲು ಸೂಚನೆ ನೀಡಲಾಗಿದೆ.

ಸರ್ಕಾರ ವಿಶೇಷವಾಗಿ ಖಾಸಗಿ ಭೂಸ್ವಾಧೀನ ಕಡಿಮೆ ಆಗುವ ಮತ್ತು ಗ್ರಾಮಗಳ ಸ್ಥಳಾಂತರವೂ ಅತಿ ಕಡಿಮೆ ಇರುವ ಪ್ರದೇಶವನ್ನು ಆಯ್ಕೆ ಮಾಡಲು ಒತ್ತು ನೀಡಿದೆ. ಈ ಮಾನದಂಡದ ಆಧಾರದ ಮೇಲೆ ಅಂತಿಮ ಸ್ಥಳವನ್ನು ನಿರ್ಧರಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.

ಪ್ರಸ್ತುತ ಚೂಡಹಳ್ಳಿ ಪ್ರದೇಶದಲ್ಲಿ ಸುಮಾರು 4,655 ಎಕರೆ ಹಾಗೂ ಸೋಮನಹಳ್ಳಿಯಲ್ಲಿ ಸುಮಾರು 4,376 ಎಕರೆ ಭೂಮಿ ಲಭ್ಯವಿದೆ. ಎರಡೂ ಪ್ರದೇಶಗಳನ್ನು ಒಟ್ಟಾಗಿ ಪರಿಗಣಿಸಿದರೆ 9 ಸಾವಿರ ಎಕರೆಗಿಂತ ಹೆಚ್ಚು ಭೂಮಿ ದೊರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಪರಿಸರ ಸಂಬಂಧಿತ ವಿಚಾರಗಳಿಗೂ ಮಹತ್ವ ನೀಡಲಾಗಿದೆ. ಸೋಮನಹಳ್ಳಿ ಪ್ರದೇಶವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸಮೀಪ ಇರುವುದರಿಂದ ವನ್ಯಜೀವಿಗಳ ಮೇಲೆ ಯೋಜನೆಯ ಪರಿಣಾಮ, ಅಗತ್ಯ ಅನುಮತಿಗಳು ಹಾಗೂ ಪರಿಸರ ಅಧ್ಯಯನದ ಕುರಿತು ಸಮಗ್ರ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈಗಾಗಲೇ ನಡೆದಿರುವ ಎಲ್ಲಾ ಪ್ರಕ್ರಿಯೆಗಳ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಅಂತಿಮ ಸ್ಥಳ ಆಯ್ಕೆಗೂ ಮುನ್ನ ಭೂಸ್ವಾಧೀನ, ಗ್ರಾಮಗಳ ಸ್ಥಳಾಂತರ, ಪರಿಸರ ಹಾಗೂ ತಾಂತ್ರಿಕ ಕಾರ್ಯಸಾಧ್ಯತೆ ಕುರಿತ ಸಂಪೂರ್ಣ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »