ಮಳೆಗಾಲದಲ್ಲಿ ಸುರಕ್ಷಿತ ಕಾರು ಚಾಲನೆಗೆ ಉಪಯುಕ್ತ 10 ಸಲಹೆಗಳು

Monsoon Car Driving Tips: ಮಳೆಗಾಲ ಪ್ರಾರಂಭವಾಗಿದೆ. ಎಲ್ಲೆಡೆ ತಂಪು, ತೇವಾಂಶದಿಂದ ಕೂಡಿದ ವಾತಾವರಣ ಸೃಷ್ಟಿಯಾಗಿದೆ. ಬಿಸಿಲಿನ ಬೇಗೆಯನ್ನು ತಣಿಸಿದ್ದು ನಿಜವಾದರೂ, ವಾಹನ ಸವಾರರಿಗೆ ಅನೇಕ ಸಮಸ್ಯೆಗಳನ್ನು ಎದುರಿಸುವಂತೆ ಮಾಡಿದೆ.

ಅದರಲ್ಲೂ ಕಾರು ಚಾಲಕರು ರಸ್ತೆಗಳ ಗುಂಡಿಗಳಲ್ಲಿ ನೀರು ನಿಲ್ಲುವುದು, ಟ್ರಾಫಿಕ್ ಜಾಮ್‌, ಇಳಿಜಾರು ರಸ್ತೆಗಳು ಮುಂತಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಈ ಮಳೆಗಾಲದಲ್ಲಿ ಡ್ರೈವಿಂಗ್‌ನಲ್ಲಿ ಎಷ್ಟೇ ನೈಪುಣ್ಯತೆ ಸಾಧಿಸಿದ್ದರೂ ತೊಂದರೆ ಆಗುವುದಂತು ಖಂಡಿತ. ಮಳೆಗಾಲದ ದಿನಗಳಲ್ಲಿ ಕಾರು ಚಲಾಯಿಸಲು ಕೆಲವು ಸರಳ ಟಿಪ್ಸ್‌ಗಳನ್ನು ಪಾಲಿಸಿದರೆ ಆರಾಮದಾಯಕದ ಪ್ರಯಣ ನಿಮ್ಮದಾಗುತ್ತದೆ.

ಹಾಗಾದರೆ ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸರಳ ಟಿಪ್ಸ್‌ಗಳೇನು ಎಂದು ನೋಡೋಣ.

ಮಳೆಗಾಲದಲ್ಲಿ ಹೆಜಾರ್ಡ್‌ ಲೈಟ್‌ ಬಳಸಬೇಡಿ

ಹೆಜಾರ್ಡ್‌ ಲೈಟ್‌ಗಳನ್ನು ತುರ್ತು ಪರಿಸ್ಥಿತಿಗಳಿಗೆ ಮಾತ್ರ ಬಳಸಲಾಗುತ್ತದೆ. ವಾಹನ ಕೆಟ್ಟು ನಿಂತಾಗ ಅಥವಾ ರಸ್ತೆ ಬದಿಯಲ್ಲಿ ನಿಲ್ಲಿಸಿದಾಗ ಮಾತ್ರ ಹೆಜಾರ್ಡ್‌ ಲೈಟ್‌ ಅನ್ನ ಬಳಸಬೇಕು.

ಡ್ರೈವ್‌ ಮಾಡುವಾಗ ಹೆಡ್‌ಲೈಟ್‌ ಮತ್ತು ಫಾಗ್‌ ಲ್ಯಾಂಪ್‌ಗಳನ್ನು ಮಾತ್ರ ಬಳಸಿ. ಇದು ರಸ್ತೆಯಲ್ಲಿ ಉತ್ತಮ ಗೋಚರತೆಯನ್ನು ಒದಗಿಸುತ್ತದೆ. ಹಿಂಬದಿಯ ಚಾಲಕರು ಗೊಂದಲಕ್ಕಿಡಾಗುವುದು ತಪ್ಪುತ್ತದೆ.

ನೀರು ತುಂಬಿರುವ ರಸ್ತೆಗಳಲ್ಲಿ ವಾಹನ ಚಲಾಯಿಸಬೇಡಿ
ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದರೆ, ನೀವು ಖಂಡಿತವಾಗಿಯೂ ಆ ಮಾರ್ಗವನ್ನು ಆರಿಸಿಕೊಳ್ಳಬೇಡಿ. ನೀರು ನಿಲ್ಲುವ ಸ್ಥಳದಲ್ಲಿ, ನೀರಿನ ಮಟ್ಟ ಎಷ್ಟಿದೆ ಎಂಬುದು ತಿಳಿದಿರುವುದಿಲ್ಲ. ಇದರಿಂದಾಗಿ ನೀರು, ಎಂಜಿನ್ ಅಥವಾ ಎಕ್ಸಾಸ್ಟ್ ಅನ್ನು ತಲುಪಬಹುದು. ಆಗ ನಿಮ್ಮ ಕಾರು ನೀರಿನ ಮಧ್ಯದಲ್ಲಿ ಸಿಲುಕಿಕೊಳ್ಳಬಹುದು.

ಇದನ್ನೂ ಓದಿ: Best Cars Under 6 Lakh : 6 ಲಕ್ಷಕ್ಕಿಂತಲೂ ಕಡಿಮೆ ಬೆಲೆಗೆ ಖರೀದಿಸಿ ಈ ಕಾರು

ನೀರಿನಲ್ಲಿ ಕಾರು ಮುಳುಗಿದ್ದರೆ ಅದನ್ನು ಸ್ಟಾರ್ಟ್‌ ಮಾಡಬೇಡಿ

ನಿಮ್ಮ ಕಾರು ನೀರಿನಲ್ಲಿ ಮುಳುಗಿದ್ದರೆ, ನೀವು ಅದನ್ನು ಸ್ಟಾರ್ಟ್ ಮಾಡುವ ಯಾವುದೇ ಸಾಹಸ ಮಾಡಬೇಡಿ. ಏಕೆಂದರೆ ಇದು ಎಂಜಿನ್ ಹೈಡ್ರೋಲಾಕ್‌ಗೆ ಕಾರಣವಾಗಬಹುದು.

ಅದರಿಂದ ನಿಮ್ಮ ವಾಹನಕ್ಕೆ ಗಂಭೀರ ಹಾನಿಯುಂಟಾಗಬಹುದು. ಕಾರನ್ನು ಸ್ಟಾರ್ಟ್ ಮಾಡುವ ಬದಲು ಟ್ರ್ಯಾಕ್ಟರ್ ಅಥವಾ ಟೋ ಸರ್ವೀಸ್‌ ಬಳಸಿ ಕಾರನ್ನು ನೀರಿನಿಂದ ಹೊರ ತೆಗೆದ ಮೇಲೆ ಸ್ಟಾರ್ಟ್‌ ಮಾಡಿ.

ಕಾರಿನಲ್ಲಿ ಗ್ಲಾಸ್ ಬ್ರೇಕರ್ ಸುತ್ತಿಗೆಯನ್ನು ಇಡಿ

ಮಳೆಗಾಲವಿರಲಿ ಅಥವಾ ಇಲ್ಲದಿರಲಿ, ನಿಮ್ಮ ಕಾರಿನಲ್ಲಿ ಯಾವಾಗಲೂ ಗಾಜು (ಗ್ಲಾಸ್‌) ಒಡೆಯುವ ಸುತ್ತಿಗೆಯನ್ನು ಇಟ್ಟುಕೊಳ್ಳಬೇಕು. ತುರ್ತು ಪರಿಸ್ಥಿತಿಯಲ್ಲಿ ಅಂದರೆ ಗಾಜು ಒಡೆಯಬೇಕಾದ ಸಮಯದಲ್ಲಿ ಅದು ನಿಮ್ಮ ನೆರವಿಗೆ ಬರುತ್ತದೆ. ಗ್ಲಾಸ್‌ ಬ್ರೇಕರ್ ಸುತ್ತಿಗೆಯನ್ನು ಯಾವಾಗಲೂ ಡ್ರೈವರ್‌ ಸೀಟ್‌ನ ಕೆಳಗಡೆ ಇಡಿ.

ಟೈರ್ ಟ್ರೆಡ್ ಪರಿಶೀಲಿಸುವುದನ್ನು ಮರೆಯಬೇಡಿ

ಮಳೆಗಾಲದಲ್ಲಿ ಟೈರ್‌ಗಳು ಉತ್ತಮ ಸ್ಥಿತಿಯಲ್ಲಿರುವುದು ಬಹಳ ಮುಖ್ಯ. ಮಳೆಗಾಲ ಪ್ರಾರಂಭವಾದ ತಕ್ಷಣ, ಟೈರ್‌ನ ಟ್ರೆಡ್ ಆಳವು ಕನಿಷ್ಠ 3 ಮಿಮೀ ಇದೆಯೇ ಎಂದು ಪರೀಕ್ಷಿಸ. ಇದಕ್ಕಿಂತ ಕಡಿಮೆಯಿದ್ದರೆ ಅಥವಾ ಸವೆದು ಹೋಗಿದ್ದರೆ, ನೀವು ಅದನ್ನು ತಕ್ಷಣ ಬದಲಾಯಿಸಿ.

ಗಾಜಿನ ಮೇಲೆ ಫಾಗಿಂಗ್ ಆಗುವುದನ್ನು ಹೀಗೆ ತಡೆಯಿರಿ
ಮಳೆಗಾಲದಲ್ಲಿ ಡಿಫಾಗರ್ ಅಥವಾ ಎಸಿಯ ಮರುಬಳಕೆ ಮೋಡ್ ಅನ್ನು ಬಳಸಿ. ಇದರಿಂದ ಗಾಜು ಬೇಗನೆ ಸ್ವಚ್ಛವಾಗುತ್ತದೆ ಮತ್ತು ಹೊರಗೆ ನೋಡಲು ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.

ವೈಪರ್ ಮತ್ತು ವಾಷರ್ ದ್ರವವನ್ನು ಪರೀಕ್ಷಿಸಿ

ಮಳೆಗಾಲದಲ್ಲಿ ಹಳೆಯ ವೈಪರ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಆದ್ದರಿಂದ, ಮಳೆಗಾಲ ಪ್ರಾರಂಭವಾದ ತಕ್ಷಣ ನೀವು ಹೊಸ ವೈಪರ್ ಬ್ಲೇಡ್‌ಗಳನ್ನು ಅಳವಡಿಸಿಕೊಳ್ಳಿ ಮತ್ತು ವಿಂಡ್‌ಶೀಲ್ಡ್ ಸ್ವಚ್ಛವಾಗಿರಲು ವಾಷರ್ ದ್ರವವನ್ನು ತುಂಬಿಸಿಡಿ.

ಕಾರಿನಲ್ಲಿ ನೀರು ಮತ್ತು ಆಹಾರವನ್ನು ಇರಿಸಿ

ಮಳೆಗಾಲದಲ್ಲಿ ಸುದೀರ್ಘ ಟ್ರಾಫಿಕ್ ಜಾಮ್ ಉಂಟಾಗಬಹುದು. ಅಂತಹ ಪರಿಸ್ಥಿತಿಯನ್ನು ಎದುರಿಸಲು ಯಾವಾಗಲೂ ನೀರಿನ ಬಾಟಲಿಗಳನ್ನು ಮತ್ತು ಕೆಲವು ಸ್ನಾಕ್ಸ್‌ಗಳನ್ನು ಒಯ್ಯಿರಿ.

ಮರಗಳ ಕೆಳಗೆ ವಾಹನ ನಿಲ್ಲಿಸಿ ಬೇಡಿ
ಮಳೆಗಾಲದಲ್ಲಿ ಮರಗಳು ಅಥವಾ ಅದರ ಕೊಂಬೆಗಳು ಮುರಿದು ಬೀಳುವ ಅಪಾಯ ಹೆಚ್ಚಿರುತ್ತದೆ. ಸನ್‌ರೂಫ್ ಮತ್ತು ಅದರ ಡ್ರೈನೇಜ್‌ ಪೈಪ್‌ಗಳನ್ನು ಪರಿಶೀಲಿಸಿ. ನೀರು ಕಾರಿನ ಒಳಗೆ ಬರದಂತೆ ನೋಡಿಕೊಳ್ಳಿ.

ಎಮರ್ಜನ್ಸಿ ಕಾಂಟ್ಯಾಕ್ಟ್‌ ನಂಬರ್‌ ಮತ್ತು ಪವರ್ ಬ್ಯಾಂಕ್ ಇರಿಸಿಕೊಳ್ಳಿ

ವಿಮೆ, ಆರ್‌ಎಸ್‌ಎ, ಟೋ ಸರ್ವಿಸ್ ಮತ್ತು ಸೇವಾ ಕೇಂದ್ರದ ಸಂಖ್ಯೆಗಳನ್ನು ಕಾರಿನಲ್ಲಿ ಇಟ್ಟುಕೊಳ್ಳಿ. ದೀರ್ಘ ಪ್ರಯಾಣಗಳಲ್ಲಿ ಮಾರ್ಗವನ್ನು ಹಂಚಿಕೊಳ್ಳಿ.

ಪವರ್‌ ಬ್ಯಾಂಕ್ ಅನ್ನು ಖಂಡಿತ ಇಟ್ಟುಕೊಳ್ಳಿ. ಅಗತ್ಯ ಬಿದ್ದಾಗ ನಿಮ್ಮ ಮೊಬೈಲ್‌ ಅನ್ನು ಸುಲಭವಾಗಿ ಚಾರ್ಜ್‌ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಭಾರತದಲ್ಲಿ ಅನಾವರಣಗೊಂಡ ಕಡಿಮೆ ವೇಗದ, ಕಡಿಮೆ ಬೆಲೆಯ ಝೆಲಿಯೊ ಗ್ರೇಸಿ ಪ್ಲಸ್‌ ಎಲೆಕ್ಟ್ರಿಕ್‌ ಸ್ಕೂಟರ್‌

Automobile 10 useful safety car driving tips in rainy season in kannada

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories