ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದೋಣಿ ದುರಂತ 11ಕ್ಕೂ ಅಧಿಕ ಸಾವು, 25 ಮಂದಿಯ ರಕ್ಷಣೆ

0

ಕೋಟಾ : ರಾಜಸ್ಥಾನದ ಬುಂಡಿ ಜಿಲ್ಲೆಯ ದಿಬ್ರಿಯಲ್ಲಿರುವ ಕಮಲೇಶ್ವರ್ ಮಹಾದೇವ ದೇವಸ್ಥಾನಕ್ಕೆ ತೆರಳಲು ಸುಮಾರು ನಲವತ್ತು ಮಂದಿ ಭಕ್ತರು ಬೆಳಗ್ಗೆ 8.45ರ ಸುಮಾರಿಗೆ ದೋಣಿ ಹತ್ತಿದ್ದಾರೆ ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಪರಿಣಾಮ ಭಾರದಿಂದ ದೋಣಿ ಮುಳುಗಿದೆ ಎನ್ನಲಾಗಿದೆ.

ಘಟನೆಯಲ್ಲಿ 11 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು. 25 ಮಂದಿಯನ್ನು ರಕ್ಷಿಸಲಾಗಿದೆ. ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಕೆಲವು ಜನರು ತಮ್ಮ ಮೋಟಾರ್ ಸೈಕಲ್‌ಗಳನ್ನು ದೋಣಿಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದೋಣಿ ಜನರ ಭಾರಕ್ಕೆ ಮುಗುಚಿಕೊಂಡಿದೆ. ಈ ವೇಳೆ ಹಲವರು ಈಜಿ ದಡ ಸೇರುವ ಪ್ರಯತ್ನ ಮಾಡಿದರು. ಇನ್ನೂ ಹಲವರು ಈಜಲಾಗದೇ ಮುಳುಗಿದ್ದಾರೆ ಎಂದಿದ್ದಾರೆ.

ಘಟನೆ ನಡೆದಾಗ ಸ್ಥಳದಲ್ಲಿ  ಇದ್ದ  ಕೆಲವು ಸ್ಥಳೀಯರು ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದು , ಇನ್ನು ಕೆಲವರು ಈಜಿಕೊಂಡು ದಡ ಸೇರಿದ್ದಾರೆ, ಮಕ್ಕಳು ಹಾಗೂ ಮಹಿಳೆಯರು ಸೇರಿ 10ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೋಟಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಶರದ್ ಚೌಧರಿ ಹೇಳಿದ್ದಾರೆ.

ಈವರೆಗೂ 6 ಮಂದಿಯ ದೇಹಗಳು ದೊರೆತಿದ್ದು, ನಾಪತ್ತೆಯಾಗಿರುವವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.ದೋಣಿ ದುರಂತ ವಿಚಾರ ತಿಳಿಯುತ್ತಲೇ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಅಂತೆಯೇ ಕೋಟಾದ ಚಂಬಲ್ ಬಳಿ ದೋಣಿ ಉರುಳಿ ಬಿದ್ದ ಘಟನೆ ದುರದೃಷ್ಟಕರ. ಅಪಘಾತಕ್ಕೀಡಾದವರ ಕುಟುಂಬಗಳಿಗೆ ನನ್ನ ಸಂತಾಪ. ಅಂತೆಯೇ ಕೋಟಾದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೆಹ್ಲೊಟ್ ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಪಡೆಗಳು ಬಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

Leave A Reply

Your email address will not be published.