20 ದಿನಗಳಲ್ಲಿ ಬರೋಬ್ಬರಿ 4,202 ಆರೋಗ್ಯ ಕಾರ್ಯಕರ್ತರಿಗೆ ಒಕ್ಕರಿಸಿದ ಕೊರೋನಾ!

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ವಿರುದ್ದ ಆರೋಗ್ಯ ಕಾರ್ಯಕರ್ತರು ಹೋರಾಟವನ್ನು ನಡೆಸುತ್ತಿದ್ದಾರೆ. ಈ ನಡುವಲ್ಲೇ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಕಳೆದ ಮೂರು ವಾರಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 4,202 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ಆರು ತಿಂಗಳಿನಿಂದಲೂ ಆರೋಗ್ಯ ಕಾರ್ಯಕರ್ತರು ಎಡೆಬಿಡದೆ ಕೊರೊನಾ ವಿರುದ್ದದ ಹೋರಾಟದಲ್ಲಿ ಕೈ ಜೋಡಿಸಿದ್ದಾರೆ. ಆದ್ರೀಗ ಕೊರೊನಾ ವಾರಿಯರ್ಸ್ ಗಳಿಗೆ ಸೋಂಕು ಆವರಿಸಿರುವುದು ಆತಂಕವನ್ನು ಮೂಡಿಸಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರು ಅಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮಹಾಮಾರಿ ಒಕ್ಕರಿಸಿಕೊಂಡಿದೆ.

ಬೆಂಗಳೂರಲ್ಲಿ 1,879 ಮಂದಿಗೆ ಸೋಂಕು ದೃಢಪಟ್ಟಿದ್ರೆ, ದಾವಣಗೆರೆಯಲ್ಲಿ 305, ಚಿಕ್ಕಬಳ್ಳಾಪುರ 268, ರಾಯಚೂರು 184 ಮತ್ತು ಮೈಸೂರಿನಲ್ಲಿ 161 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಕೊರೋನಾ ಸೋಂಕು ತಗುಲಿದೆ.

ಆದರೆ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ಯಾವ ಮಟ್ಟದಲ್ಲಿದೆ ಎಂದು ತಿಳಿದು ಬಂದಿಲ್ಲ. ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ಹರಡುವಿಕೆಯನ್ನ ತಡೆಯುವ ನಿಟ್ಟಿನಲ್ಲಿ ತರಬೇತಿಯನ್ನು ನೀಡಲಾಗಿತ್ತು. ಆದರೆ ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್‌ಗಳನ್ನು ಧರಿಸುವಾಗ ಸಣ್ಣ ತಪ್ಪುಗಳಾದರೂ ವೈರಸ್ ತಗುಲುವ ಸಾಧ್ಯತೆಗಳಿರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಕೇವಲ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ ಆರೋಗ್ಯ ಕಾರ್ಯಕರ್ತರಿಗೆ ಮಾತ್ರವಲ್ಲ ಸಾರ್ವಜನಿಕ ಸ್ಥಳಗಳು, ಅವರ ಮನೆಯ ಹತ್ತಿರ ಅಥವಾ ಸಾರ್ವಜನಿಕ ವಾಹನಗಳಲ್ಲಿ ಸಂಚಾರ ಮಾಡುವ ವೇಳೆಯೂ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಗುಲಿರುವ ಸಾಧ್ಯತೆಗಳಿರುತ್ತವೆ ಎಂದಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದಲೂ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಈ ನಡುವಲ್ಲೇ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಸೋಂಕು ಆವರಿಸಿರುವುದು ಆತಂಕವನ್ನು ತಂದೊಡ್ಡಿದೆ.

Leave A Reply

Your email address will not be published.