ಹೊರ ರಾಜ್ಯ ಪ್ರಯಾಣಿಕರಿಗಿಲ್ಲ ಕ್ವಾರಂಟೈನ್, ಸೀಲ್ ಡೌನ್ : ರಾಜ್ಯ ಸರಕಾರದಿಂದ ಮಹತ್ವದ ಆದೇಶ

0

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹೊರ ರಾಜ್ಯಗಳ ಪ್ರಯಾಣಿಕರಿಗೆ ರಾಜ್ಯ ಸರಕಾರ ಹೇರಿದ್ದ ನಿರ್ಬಂಧ ವನ್ನು ಹಿಂಪಡೆದಿದೆ. ಹೋಮ್ ಕ್ವಾರಂಟೈನ್, ಗಡಿ ತಪಾಸಣೆ, ಸೀಲ್ ಡೌನ್ ಕುರಿತಂತೆ ಮಹತ್ವದ ಆದೇಶ ಹೊರಡಿಸಲಾಗಿದೆ.

ಕೇಂದ್ರ ಸರಕಾರ ಹೊರಡಿಸಲಾಗಿರುವ ಅನ್ ಲಾಕ್ -3 ಮಾರ್ಗಸೂಚಿಯ ಅನ್ವಯ ಅಂತರ್ ರಾಜ್ಯ ಪ್ರಯಾಣಿಕರಿಗೆ ಸರಕು ಹಾಗೂ ಜನರ ಸಂಚಾರದ ಮೇಲಿನ ನಿರ್ಬಂಧವನ್ನು ತೆಗೆದು ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪರಿಷ್ಕೃತ ಆದೇಶವನ್ನು ಹೊರಡಿಸಿದೆ. ಪ್ರಮುಖವಾಗಿ ಅಂತರಾಜ್ಯ ಪ್ರಯಾಣಿಕರು ಇನ್ನು ಮುಂದೆ ರಾಜ್ಯಕ್ಕೆ ಬರಲು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಸುವ ಅವಶ್ಯಕತೆಯಿರುವುದಿಲ್ಲ.

ಮಾತ್ರವಲ್ಲ ರಾಜ್ಯದ ಗಡಿಭಾಗ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ವೈದ್ಯಕೀಯ ತಪಾಸಣೆ ನಡೆಸುವುದರಿಂದಲೂ ವಿನಾಯಿತಿಯನ್ನು ನೀಡಲಾಗಿದೆ. ಪ್ರಯಾಣಿಕರನ್ನು ವರ್ಗೀಕರಣ ಮಾಡುವುದು, ಕೈ ಮೇಲೆ ಕ್ವಾರಂಟೈನ್ ಮುದ್ರೆ ಹಾಕುವುದು, ಜನರನ್ನು ಬೇರ್ಪಡಿಸುವಿಕೆ, ಪರೀಕ್ಷಿಸುವಿಕೆಯನ್ನು ಕೈಬಿಡಲಾಗಿದೆ.

ಇಷ್ಟೇ ಅಲ್ಲಾ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಜಿಲ್ಲೆಯ ಸ್ವೀಕಾರ ಕೇಂದ್ರಗಳಲ್ಲಿ ತಪಾಸಣೆ ನಡೆಸುವುದು ಹಾಗೂ 14 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ನಿಯಮವನ್ನು ಕೈಬಿಡಲಾಗಿದೆ. ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ಮನೆ ಬಾಗಿಲಿಗೆ ಪೋಸ್ಟರ್ ಹಚ್ಚುವುದನ್ನು ಕೈಬಿಡಲಾಗಿದೆ. ಮಾತ್ತವಲ್ಲ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ರೆ ಅಂತಹವರು ಕ್ವಾರಂಟೈನ್ ಗೆ ಒಳಪಡದೇ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

ಆದರೆ ಜ್ವರ, ಕೆಮ್ಮು, ಶೀತ ಗಂಟಲು ನೋವು, ಉಸಿರಾಟ ತೊಂದರೆ ಸೇರಿದಂತೆ ಶಂಕಿತ ಕೊರೊನಾ ಲಕ್ಷಣಗಳು ಕಂಡು ಬಂದ್ರೆ ವೈದ್ಯಕೀಯ ಸಮಾಲೋಚನೆಯನ್ನು ಕಡ್ಡಾಯವಾಗಿ ಪಡೆಯುವಂತೆ ಸೂಚನೆಯನ್ನು ನೀಡಲಾಗಿದೆ. ಒಂದೊಮ್ಮೆ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಲ್ಲಿ ರೋಗ ಲಕ್ಷಣ ಕಂಡು ಬಂದ್ರೆ ಅಂತಹವರನ್ನು ಕಡ್ಡಾಯವಾಗಿ ಪ್ರತ್ಯೇಕಿಸಿ, ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ.

ಹೊರ ರಾಜ್ಯಗಳ ಪ್ರಯಾಣಿಕರು ರಾಜ್ಯಕ್ಕೆ ಮರಳಿದ ನಂತರದಲ್ಲಿ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಕೊರೊನಾ ಶಿಷ್ಟಾಚಾರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ಆದೇಶ ಹೊರಡಿಸಿದ್ದಾರೆ.

Leave A Reply

Your email address will not be published.