ಸರ್ಕಾರದ ಮೇಲೆ ಮುನಿದ ಕನ್ನಡಪರ ಸಂಘಟನೆಗಳು…! ಡಿ.5 ಕ್ಕೆ ಕರ್ನಾಟಕ ಬಂದ್…!!

ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ತಿರುಗಿ ಬಿದ್ದಿರುವ ಕನ್ನಡಪರ ಸಂಘಟನೆಗಳು ಡಿ.5 ಕ್ಕೆ ಬಂದ್ ನಡೆಸಿಯೇ ಸಿದ್ಧ ಎಂದಿವೆ. ಈ ಕುರಿತು ನಗರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರಕ್ಕೆ ಮರಾಠಾ ಪ್ರಾಧಿಕಾರ ನಿಗಮ ಘೋಷಣೆ ಹಿಂಪಡೆಯಲು ನವೆಂಬರ್ 30 ರವರೆಗೆ ಗಡುವು ನೀಡಿದ್ದೇವೆ.

ಒಂದೊಮ್ಮೆ ಸರ್ಕಾರ ನಮ್ಮ ಬೇಡಿಕೆಯಂತೆ ಮರಾಠ ಅಭಿವೃದ್ಧಿ ಪ್ರಾಧಿಕಾರ ನಿಗಮ ಘೋಷಣೆಯನ್ನು ಹಿಂಪಡೆಯದಿದ್ದರೇ ಡಿ.5 ರಂದು ರಾಜ್ಯ ವ್ಯಾಪಿ ಬಂದ್ ಮಾಡುತ್ತೇವೆ. ಸರ್ಕಾರದ ಪಿತೂರಿಗಳಿಗೆ ಹೆದರುವುದಿಲ್ಲ ಎಂದಿದ್ದಾರೆ.

ಸರ್ಕಾರ ನಮ್ಮ ಬಂದ್ ವಿಫಲಗೊಳಿಸಲು ಸರ್ಕಸ್ ನಡೆಸುತ್ತಿದೆ. ಆದರೇ ಸಾವಿರಾರು ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದ್ದು ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೇ ಬಂದ್ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಬಂದ್ ವೇಳೆ ಏನೇ ಅನಾಹುತ ಆದರೂ ಅದಕ್ಕೆ ಸರ್ಕಾರವೇ ಹೊಣೆ ಎಂದು ವಾಟಾಳ್ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಟ ಹಾಗೂ ಹೋರಾಟಗಾರ ಮುಖ್ಯಮಂತ್ರಿ ಚಂದ್ರು, ಸಿಎಂ ಬಿಎಸ್ವೈ ಕನ್ನಡಪರ ಸಂಘಟನೆಗಳನ್ನು ರೋಲ್ಕಾಲ್ ಸಂಘಟನೆ ಎಂದಿರುವ ಕುರಿತು ಪ್ರತಿಕ್ರಿಯಿಸಿದ್ದು, ಕನ್ನಡಪರ ಸಂಘಟನೆಗಳ ಬದ್ಧತೆ ಪ್ರಶ್ನಿಸಿದ್ದನ್ನು ಖಂಡಿಸಿದ್ದಾರೆ. ಅಷ್ಟೇ ಅಲ್ಲ ಬಿಎಸ್ವೈ ಸರ್ಕಾರವೇ ರೋಲ್ ಕಾಲ್ ಸರ್ಕಾರ ಎಂದಿದ್ದಾರೆ.

ಒಟ್ಟಿನಲ್ಲಿ ಬಿಜೆಪಿ ಸರ್ಕಾರ ಮರಾಠರ ಒಲೈಕೆಗೆ ಪ್ರಾಧಿಕಾರ ಘೋಷಿಸಿ ಕನ್ನಡಿಗರ ಹಾಗೂ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿದ್ದು, ಡಿ.5 ರಂದು ಬಂದ್ ಬಹುತೇಕ ಖಚಿತ ಎನ್ನಲಾಗುತ್ತಿದೆ.

Comments are closed.