ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆ : ಎಚ್ಚರ…ಎಚ್ಚರ….ಲಾಕ್ ಡೌನ್ ಪಾಲನೆಯೊಂದೇ ಪರಿಹಾರ

0

ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿ ಎಲ್ಲೆಡೆ ಭೀತಿಯನ್ನು ಸೃಷ್ಟಿಸಿದೆ. ವಿಶ್ವವನ್ನು ನಡುಗಿಸಿರೊ ಕೊರೊನಾ ಇದೀಗ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಕಳೆದ 12 ಗಂಟೆಗಳ ಅವಧಿಯಲ್ಲಿ 4 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 37ಕ್ಕೆ ಏರಿಕೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ.

ಚೀನಾ, ಇಟಲಿ, ಇರಾನ್ ದೇಶಗಳಲ್ಲಿ ಮರಣ ಮೃದಂಗವನ್ನು ಬಾರಿಸಿರೊ ಕೊರೊನಾ ವೈರಸ್ ಇದೀಗ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕೇಂದ್ರ, ರಾಜ್ಯ ಸರಕಾರಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕರ್ನಾಟಕ ರಾಜ್ಯ ಸಂಪೂರ್ಣವಾಗಿ ಲಾಕ್ ಡೌನ್ ಆಗಿದೆ. ಆದರೆ ಕಳೆದ 12 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 4 ಮಂದಿಗೆ ಕೊರೊನಾ ವೈರಸ್ ಧೃಢಪಟ್ಟಿರುವುದನ್ನು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. ಇನ್ನೂ ನೂರಾರು ಮಂದಿಯ ವೈದ್ಯಕೀಯ ವರದಿ ಇನ್ನಷ್ಟೇ ಕೈಸೇರಬೇಕಿದೆ.

ದೇಶದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿರೋದು ಕೇರಳದಲ್ಲಿ ನಂತರ ಮಹಾರಾಷ್ಟ್ರದಲ್ಲಿ ಆದರೆ ಮೂರನೇ ಸಾಲಿನಲ್ಲಿ ಇದೀಗ ಕರ್ನಾಟಕ ಬಂದು ನಿಂತಿದೆ. ಕೇರಳದಲ್ಲಿ 87, ಮಹಾರಾಷ್ಟ್ರದಲ್ಲಿ 84, ಕರ್ನಾಟಕದಲ್ಲಿ 37, ದೆಹಲಿಯಲ್ಲಿ 30, ಗುಜರಾತ್ ನಲ್ಲಿ 29, ಹರ್ಯಾಣ 12, ಆಂಧ್ರಪ್ರದೇಶ 7 ಮಧ್ಯಪ್ರದೇಶ 7, ಹಿಮಾಚಲ ಪ್ರದೇಶ್ 3, ಬಿಹಾರ್ 2, ಒಡಿಶಾ 2, ಚತ್ತೀಸ್ ಗಢದಲ್ಲಿ 1 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಕಳೆದ 10 ದಿನಗಳಿಂದಲೂ ಕೊರೊನಾ ಕಾಡ್ಗಿಚ್ಚಿನಂತೆ ಹರಡುತ್ತಿದೆ.

ರಾಜ್ಯ ಸರಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೂ ಕೂಡ ಜನ ಮಾತ್ರ ಗಾಢನಿದ್ದೆಯಿಂದ ಎದ್ದೇಳುತ್ತಿಲ್ಲ. ಲಾಕ್ ಡೌನ್ ಆದೇಶವನ್ನು ರಾಜ್ಯದ ಜನತೆ ಕಡ್ಡಾಯವಾಗಿ ಪಾಲನೆ ಮಾಡಿದ್ರೆ ಕೊರೊನಾದಿಂದ ಮುಕ್ತರಾಗಬಹುದು ಅಂತಾ ಆರೋಗ್ಯ ಇಲಾಖೆ, ತಜ್ಞರು ಸಾರಿ ಸಾರಿ ಹೇಳುತ್ತಿದ್ದಾರೆ. ಆದರೆ ಜನ ಮಾತ್ರ ಕೊರೊನಾಗೆ ಕ್ಯಾರೇ ಅಂತಿಲ್ಲ. ಪರಿಸ್ಥಿತಿ ಹೀಗೆ ಆದ್ರೆ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗೋ ಆತಂಕ ಎದುರಾಗಿದೆ. ಜಿಲ್ಲಾಡಳಿತಗಳು ಕೂಡ ಜನತೆ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿವೆ.

Leave A Reply

Your email address will not be published.