ಮಂಗಳೂರು ವಿವಿಯಲ್ಲಿ ಕುಂದ ಕನ್ನಡ ಭಾಷೆ ಅಧ್ಯಯನ ಪೀಠ ಸ್ಥಾಪನೆ : ಸರಕಾರಕ್ಕೆ ಆಗ್ರಹ

ಮಂಗಳೂರು : ಕುಂದಾಪ್ರ ಕನ್ನಡ ಭಾಷೆಯ ಉಳಿವಿಗಾಗಿ ಹಲವು ಪ್ರಯತ್ನಗಳು ನಡೆಯುತ್ತಿದೆ. ಇದೀಗ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಕುಂದ ಕನ್ನಡ ಭಾಷೆ ಅಧ್ಯಯನ ಪೀಠ ಸ್ಥಾಪಿಸುವ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ರಾಜ್ಯ ಸರಕಾರಕ್ಕೆ ಪತ್ರಬರೆದಿದ್ದಾರೆ

ಕೋಟ ಶಿವರಾಮ ಕಾರಂತ, ಮೊಗೇರಿ ಗೋಪಾಲಕೃಷ್ಣ ಅಡಿಗರು, ಗುಲ್ವಾಡಿ ವೆಂಕಟರಾಯರು ಕುಂದ ಕನ್ನಡ ಭಾಷೆಯ ಸೊಬಗನ್ನು ವಿಶ್ವಕ್ಕೆ ಪಸರಿಸಿದ್ದಾರೆ. ಅಲ್ಲದೇ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ, ಬ್ರಹ್ಮಾವರ, ಹೆಬ್ರಿ ಹಾಗೂ ಉಡುಪಿ ತಾಲೂಕಿನಲ್ಲಿಯೂ ಕುಂದಗನ್ನಡ ಭಾಷೆ ಹಾಸುಹೊಕ್ಕಾಗಿ. ಕುಂದಾಪುರ‌ ಕನ್ನಡ ಭಾಷೆಯ ಅನೇಕ ಶಬ್ದಗಳು ಮರೆಯಾಗುತ್ತಿದ್ದು, ಭಾಷೆಯ ಶಬ್ದಕೋಶ‌ ರಚನೆಯ ಅಗತ್ಯವಿದೆ.‌ ಭಾಷೆಯ ಕುರಿತು ಅದ್ಯಯನ ‌ನಡೆಸುವ ಸಲುವಾಗಿ ಮಂಗಳೂರು ವಿವಿಯಲ್ಲಿ ಕುಂದ ಕನ್ನಡ ಅಧ್ಯಯನ ಪೀಠ ಸ್ಥಾಪಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಪ್ರಸ್ತಾವನೆಯೊಂದನ್ನು ಮಂಗಳೂರು ವಿವಿಗೆ ಸಲ್ಲಿಸಿದ್ದಾರೆ.

ಪ್ರಮುಖವಾಗಿ ಕುಂದ ಕನ್ನಡ ಅಧ್ಯಯನ, ಜಾನಪದ ಆಚರಣೆ, ಭಾಷೆಯ ದಾಖಲೀಕರಣ ಮತ್ತು ಸಂಶೋಧನೆ ನಡೆಸಲು ಅಧ್ಯಯನ ಪೀಠ  ಅನುಕೂಲವಾಗಲಿದೆ‌ ಎಂದು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ‌ ಡಿಸೆಂಬರ್ 30ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿಯೂ ಕುಂದ ಕನ್ನಡ ಭಾಷೆ ಅಧ್ಯಯನ ಪೀಠ ಸ್ಥಾಪನೆ ಮಾಡುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.

ಇದೀಗ ಮಂಗಳೂರು ವಿವಿ ಕುಲಸಚಿವರು ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕುಂದಾಪುರ ಕನ್ನಡ ಭಾಷೆ ಅಧ್ಯಯನ ‌ಪೀಠ ಸ್ಥಾಪನೆಗೆ ಅನುಮತಿ ಹಾಗೂ 25 ಲಕ್ಷ ಮೂಲ ನಿಧಿ ಅನುದಾನ ಬಿಡುಗಡೆ ಮಾಡುವ ಕುರಿತು ಸೂಕ್ತ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದಾರೆ.

Comments are closed.