ಸಚಿವ ಶ್ರೀಪಾದ ನಾಯಕ್ ಸ್ಥಿತಿ ಗಂಭೀರ : ಗೋವಾ ಸಿಎಂ ಜೊತೆ ಪ್ರಧಾನಿ ಮೋದಿ ಚರ್ಚೆ

ಕಾರವಾರ : ಪುಣ್ಯಕ್ಷೇತ್ರಗಳ ದರ್ಶನಕ್ಕೆ ತರಳುತ್ತಿದ್ದ ವೇಳೆಯಲ್ಲಿ ನಡೆದ ಅಪಘಾತದಲ್ಲಿ ಕೇಂದ್ರ ಸಚಿವರ ಶ್ರೀಪಾದ ನಾಯಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಗೋವಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡ ಉಳಿದ ನಾಲ್ವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಕುಟುಂಬ ಸಮೇತರಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಗಂಟೆ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ಭೇಟಿ ಮಾಡಿದ್ದರು. ಯಲ್ಲಾಪುರದಿಂದ ಉತ್ತರ ಕನ್ನಡದ ಗೋಕರ್ಣಕ್ಕೆ ತಮ್ಮ ಫಾರ್ಚೂನರ್‌ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹೊಸಕಂಬಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಗೋಕರ್ಣಕ್ಕೆ ತೆರಳುವ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಅಪಘಾತದಲ್ಲಿ ಶ್ರೀಪಾದ ನಾಯಕ್ ಅವರ ಪತ್ನಿ ವಿಜಯ ನಾಯಕ್ ಹಾಗೂ ಆಪ್ತಕಾರ್ಯದರ್ಶಿ ದೀಪಕ್ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಸಚಿವ ಶ್ರೀಪಾದ ನಾಯಕ್, ತುಕಾರಾಮ ಪಾಟೀಲ್, ಸಾಯಿಕಿರಣ್, ಚಂದನ್, ಯಶವಂತ್ ನಾಯ್ಕ ಅವರನ್ನು ಗೋವಾದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಕಳೆದೆರಡು ದಿನಗಳಿಂದಲೂ ಕರಾವಳಿ ಜಿಲ್ಲೆಗಳಿಗೆ ಭೇಟಿ ನೀಡಿರುವ ಶ್ರೀಪಾದ ನಾಯಕ್ ಅವರು ಉಡುಪಿ ಜಿಲ್ಲೆಯ ಕೋಟದಲ್ಲಿರುವ ಅಮೃತೇಶ್ವರಿ ದೇವಸ್ಥಾನಕ್ಕೆ ನಿನ್ನೆಯಷ್ಟೇ ಭೇಟಿಯನ್ನು ಕೊಟ್ಟಿದ್ದರು. ನಂತರದಲ್ಲಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದಿದ್ದರು.

ಶ್ರೀಪಾದ ನಾಯಕ್ ಅವರಿಗೆ ಅಪಘಾತವಾಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಜೊತೆಗೆ ಚರ್ಚೆ ನಡೆಸಿದ್ದಾರೆ. ಸಚಿವ ಶ್ರೀಪಾದ ನಾಯಕ್ ಅವರ ಆರೋಗ್ಯದ ಕುರಿತು ಮಾಹಿತಿಯನ್ನು ಪಡೆದುಕೊಂಡು, ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕಲ್ಪಿಸುವಂತೆಯೂ ಸೂಚನೆಯನ್ನು ನೀಡಿದ್ದಾರೆ.

ಇನ್ನು ಕಾರು ಅಪಘಾತದಲ್ಲಿ ಮೃತಪಟ್ಟ ಶ್ರೀಪಾದ ನಾಯಕ್ ಅವರ ಪತ್ನಿ ವಿಜಯಾ ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Comments are closed.