ತಾಯಿಯ ಅಂತ್ಯಕ್ರಿಯೆಗೆ ದುಬೈನಿಂದ ಬಂದ : ಆದ್ರೀಗ ಕುಟುಂಬದ 11 ಮಂದಿಗೂ ಕೊರೊನಾ !

0

ಮಧ್ಯಪ್ರದೇಶ : ಆತ ದೂರದ ದುಬೈನ ಹೋಟೆಲ್ ನಲ್ಲಿ ಕೆಲಸ ಮಾಡ್ತಿದ್ದ. ತಾಯಿ ನಿಧನದ ಸುದ್ದಿ ಕೇಳಿ ದೂರದ ದುಬೈನಿಂದ ತನ್ನೂರಿಗೆ ಬಂದಿದ್ದ. ಆದ್ರೀಗ ಆತನ ಕುಟುಂಬದ 11 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಹೌದು, ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೊರೊನಾ ಜಿಲ್ಲೆಯ ನಿವಾಸಿಯಾಗಿರೋ ವ್ಯಕ್ತಿ ಹಲವು ವರ್ಷಗಳಿಂದಲೂ ದುಬೈನ ಹೋಟೆಲ್ ನಲ್ಲಿ ವೈಟರ್ ಕೆಲಸ ಮಾಡಿಕೊಂಡಿದ್ದ. ಆದರೆ ತಾಯಿಯ ನಿಧನ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದ. ಕೊರೊನಾ ಭೀತಿಯ ನಡುವಲ್ಲೇ ಸಂಬಂಧಿಕರು ಆತನನ್ನು ಮಾರ್ಚ್ 17ರಂದು ಊರಿಗೆ ಕರೆಯಿಸಿಕೊಂಡಿದ್ದರು. ಕೊನೆಗೂ ವ್ಯಕ್ತಿ ತಾಯಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾನೆ.

ಮನೆಯಲ್ಲಿಯೇ ಉಳಿದುಕೊಂಡಿದ್ದ ವ್ಯಕ್ತಿ ಹಾಗೂ ಆತನ ಪತ್ನಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು. ಅಲ್ಲದೇ ಕುಟುಂಬದ ಸದಸ್ಯರನ್ನು ಮುಂಜಾಗ್ರತಾ ಕ್ರಮವಾಗಿ ತಪಾಸಣೆಗೆ ಒಳಪಡಿಸಿದಾಗ ಕಟುಂಬದ 11 ಮಂದಿಗೂ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ.

ಪ್ರಕರಣದಲ್ಲಿ ಒಟ್ಟು 28 ಮಂದಿಯನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗಿದ್ದು, ಉಳಿದ 18 ಮಂದಿಯಲ್ಲಿ ಕೊರೊನಾ ಸೋಂಕು ಇಲ್ಲಾ ಅಂತಾ ಮೊರೆನಾ ಜಿಲ್ಲಾಧಿಕಾರಿ ಪ್ರಿಯಾಂಕದಾಸ್ ಹೇಳಿದ್ದಾರೆ.

ಬಡಕುಟುಂಬವಾಗಿರೋ ಕಾರಣ ಇಡೀ ಕುಟುಂಬ ಸಣ್ಣ ಮನೆಯಲ್ಲಿ ವಾಸವಾಗಿತ್ತು. ಹೀಗಾಗಿ ಸೋಂಕು ಮನೆಮಂದಿಗೆಲ್ಲಾ ವ್ಯಾಪಿಸಿದೆ. ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ದೃಢಪಟ್ಟಿರೋ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕುಟುಂಬ ವಾಸಿಸುತ್ತಿದ್ದ ಮನೆಯನ್ನು ಸ್ವಚ್ಚಗೊಳಿಸಲಾಗಿದೆ. ಶಂಕಿತ ರೋಗಲಕ್ಷಣ ಕಂಡುಬಂದವರ ಮೇಲೆಲ್ಲಾ ಹದ್ದಿನಕಣ್ಣು ಇರಿಸಿದೆ.

ಇನ್ನು ಅಂತ್ಯಸಂಸ್ಕಾರದಲ್ಲಿ ನೂರಾರು ಮಂದಿ ಪಾಲ್ಗೊಂಡಿರೋ ಹಿನ್ನೆಲೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆನ್ನುವ ಮಾಹಿತಿಯನ್ನೂ ಕಲೆಹಾಕಲಾಗುತ್ತಿದೆ. ದುಬೈನಿಂದ ಬಂದಿರುವ ವ್ಯಕ್ತಿಯ ಸಂಪೂರ್ಣ ಟ್ರಾವೆಲ್ ಹಿಸ್ಟರಿಯನ್ನೂ ಜಿಲ್ಲಾಡಳಿತ ಕಲೆ ಹಾಕಿದ್ದು, ಸೋಂಕು ಹರಡದಂತೆ ಕ್ರಮವಹಿಸಲಾಗಿದೆ.

Leave A Reply

Your email address will not be published.