ಕೊನೆಗೂ ಬಿಡುಗಡೆ ಭಾಗ್ಯ…! ಗಂಡ-ಹೆಂಡತಿ ಸುಂದರಿಗೆ ಷರತ್ತುಬದ್ಧ ಜಾಮೀನು..!!

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ  ಜೈಲು ಸೇರಿದ್ದ ಗಂಡ-ಹೆಂಡತಿ ಬೆಡಗಿ ಸಂಜನಾಗೆ ಕೊನೆಗೂ ಜಾಮೀನು ಭಾಗ್ಯ ಸಿಕ್ಕಿದ್ದು,ಶುಕ್ರವಾರ ಸಂಜೆ ಅಥವಾ ಶನಿವಾರ ಮುಂಜಾನೆ ಸಂಜನಾ ಜೈಲಿನಿಂದ ಹೊರಬರಲಿದ್ದಾರೆ.

ಅನಾರೋಗ್ಯದ ಕಾರಣ ಮುಂದಿಟ್ಟು ಹೈಕೋರ್ಟಗೆ ಜಾಮೀನು ಅರ್ಜಿ ಸಲ್ಲಿಸಿದ್ದ ಸಂಜನಾ ಪರ ವಕೀಲರು ಸಂಜನಾಗೆ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿರೋದರಿಂದ ಬೇಲ್ ನೀಡುವಂತೆ ಮನವಿ ಮಾಡಿದ್ದರು. ಸಂಜನಾ ಪರ ವಾದ ಮಂಡಿಸಿದ್ದ ನ್ಯಾಯವಾದಿ ಹಜ್ಮತ್ ಪಾಷಾ,  ಸಂಜನಾಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಇಲ್ಲದಿದ್ದರೇ ಬ್ರೇನ್ ಹೆಮರೆಜ್ ನಂತಹ ಗಂಭೀರ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದಿದ್ದರು.

ಸಂಜನಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ನ್ಯಾ.ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ  ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 3 ಲಕ್ಷಗಳ ವೈಯಕ್ತಿಕ ಬಾಂಡ್ ನೀಡಬೇಕು. ಇಬ್ಬರು ಶ್ಯೂರಿಟಿ ನೀಡಬೇಕು. ಅಲ್ಲದೇ ಪ್ರತಿ 15 ದಿನಕ್ಕೊಮ್ಮೆ ತನಿಖಾಧಿಕಾರಿಗಳ ಎದುರು ಹಾಜರಾಗಿ ಸಹಿ ಹಾಕಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದೆಂಬ ಷರತ್ತು ವಿಧಿಸಿದೆ.

ಇದಕ್ಕೂ ಮುನ್ನ ಹೈಕೋರ್ಟ್ ವಾಣಿವಿಲಾಸ ಆಸ್ಪತ್ರೆಯಲ್ಲಿ ಸಂಜನಾ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಿದ್ದ ಸರ್ಕಾರಿ ವಕೀಲರು ಸಂಜನಾಗೆ ಜೈಲಿನ ಆಸ್ಪತ್ರೆಯಲ್ಲೇ  ಚಿಕಿತ್ಸೆ ನೀಡಬಹುದು ಎಂದಿದ್ದರು. ಕೊನೆಗೂ ಸಂಜನಾಗೆ ಜಾಮೀನು ಮಂಜೂರಾಗಿದ್ದು, 85 ದಿನಗಳ ಜೈಲುವಾಸ ಕೊನೆಗೊಂಡಿದೆ.

ಇನ್ನು ಸಂಜನಾಗೆ ಜಾಮೀನು ಮಂಜೂರಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಜೈಲಿನ ಆಸ್ಪತ್ರೆಯಲ್ಲೇ ಸಂಭ್ರಮಿಸಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ನಟಿ ರಾಗಿಣಿಯನ್ನು ತಬ್ಬಿಕೊಂಡು ಕಣ್ಣಿರಿಟ್ಟಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ ರಾಗಿಣಿಗೂ ಸಧ್ಯದಲ್ಲೇ ಬೇಲ್ ಸಿಗಲಿದೆ ಎಂದು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ಜೊತೆ ನಡೆಸಿದ ಚಾಟ್, ಡ್ರಗ್ಸ್ ಸಪ್ಲೈ, ಸೆಕ್ಸ್ ಸ್ಕ್ಯಾಂಡಲ್ ಸೇರಿದಂತೆ ಹಲವು ಆರೋಪದ ಮೇಲೆ ಸಪ್ಟೆಂಬರ್ 8 ರಂದು ಜೈಲು  ಸೇರಿದ್ದ ಸಂಜನಾ ಬೇಲ್ ಗಾಗಿ ಇನ್ನಿಲ್ಲದ ಸರ್ಕಸ್ ನಡೆಸಿದ್ದರು. ಇದೀಗ ಆರೋಗ್ಯ ಸಮಸ್ಯೆಯ ಕಾರಣ ಮುಂದಿಟ್ಟು ಜಾಮೀನು ಪಡೆದಿದ್ದಾರೆ.

Comments are closed.