ಹೊಸಮನೆಗಾಗಿ ಮೇಲ್ಛಾವಣಿ ಏರಿದ ಅಜ್ಜಿ…! ವೃದ್ಧೆ ಪ್ರತಿಭಟನೆಗೆ ಕ್ಯಾರೇ ಎನ್ನದ ಸಚಿವರು..!!

ಕಲ್ಬುರ್ಗಿ: ಕಲ್ಬುರ್ಗಿ ಜಿಲ್ಲೆ ರಣಮಳೆಗೆ ತತ್ತರಿಸಿ ಹೋಗಿದ್ದು ಜನರು ನೀರಿನಲ್ಲಿ ತೇಲಿಹೋಗುತ್ತಿರುವ ಬದುಕನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಈ ಮಧ್ಯೆ ಅಜ್ಜಿಯೊಬ್ಬರು ಕುಸಿಯಲು ಸಿದ್ಧವಾಗಿರುವ ತಮ್ಮ ಮನೆಯ ಮೇಲೇರಿ ಹೊಸ ಮನೆ ನಿರ್ಮಿಸಿಕೊಡುವಂತೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಲ್ಬುರ್ಗಿ ಜಿಲ್ಲೆಯ ಫಿರೋಜಾಬಾದ್ ಗ್ರಾಮದ ಕಮಲಮ್ಮ ಎಂಬ ಹೊಸ ಸೂರಿಗಾಗಿ ಆಗ್ರಹಿಸಿ ಹಳೆ ಮನೆಯ ಮೇಲ್ಚಾವಣಿ ಮೇಲೇರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಳೆ ಹಾಗೂ ಭೀಮಾ ನದಿ ಪ್ರವಾಹಕ್ಕೆ ನನ್ನ ಮನೆ ಹಾಳಾಗಿದ್ದು, ವಾಸ್ತವ್ಯಕ್ಕೆ ಯೋಗ್ಯವಾಗಿಲ್ಲ. ಹೀಗಾಗಿ ಸರ್ಕಾರ ಹಾಗೂ ಸ್ಥಳೀಯ ಆಡಳಿತ ನನಗೆ ಹೊಸ ಮನೆ ಕಟ್ಟಿಸಿಕೊಡಬೇಕೆಂದು ಅಜ್ಜಿ ಆಗ್ರಹಿಸಿದ್ದಾರೆ.

ಇಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಪ್ರವಾಹ ಪರಿಶೀಲನೆಗೆ ಆಗಮಿಸಿದ್ದು, ಈ ವೇಳೆಯೂ ಅಜ್ಜಿ ಮನೆ ಮೇಲೆಯೇ ಕುಳಿತಿದ್ದರು. ಆದರೆ ಸಚಿವರು ಅಜ್ಜಿಯ ವ್ಯಥೆ ಆಲಿಸದೇ ಮುಂದೇ ಸಾಗಿದ್ದಾರೆ.

ಈ ಅಜ್ಜಿ ಮಳೆ ಹಾಗು ನಡುಗುವ ಚಳಿಯಲ್ಲಿ ಕಳೆದ ಮೂರು ದಿನದಿಂದ ಮನೆಯ ಮೇಲೇರಿ ಪ್ರತಿಭಟನೆ ನಡೆಸುತ್ತಿದ್ದು, ಅಸ್ವಸ್ಥರಾಗುವ ಸಾಧ್ಯತೆ ಇದ್ದರೂ ಕೆಳಕ್ಕೆ ಇಳಿಯಲು ಒಪ್ಪುತ್ತಿಲ್ಲ.ಇಂತಹ ವೃದ್ಧೆಯನ್ನು ಸೌಜನ್ಯಕ್ಕೂ ಮಾತನಾಡಿಸದ ಕಂದಾಯ ಸಚಿವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.