ವರವಾಯ್ತು ವಂದೇ ಭಾರತ್​ ಮಿಷನ್ : ತಾಯ್ನಾಡಿಗೆ ಮರಳಿದ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ ?

0

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದ ವಿದೇಶಗಳಲ್ಲಿ ಲಕ್ಷಾಂತರ ಮಂದಿ ಸಿಲುಕಿದ್ದಾರೆ. ಇಂತಹ ಭಾರತೀಯರಿಗೆ ತಾಯ್ನಾಡಿಗೆ ಮರಳಲು ಇದೀಗ ವಂದೇ ಭಾರತ್ ಮಿಷನ್ ವರದಾನವಾಗಿ ಪರಿಣಮಿಸಿದ್ದು, ಲಕ್ಷಾಂತರ ಮಂದಿ ಭಾರತಕ್ಕೆ ವಾಪಾಸಾಗಿದ್ದಾರೆ.

ದೇಶದಲ್ಲಿ ಲಾಕ್ ಡೌನ್ ಹಂತ ಹಂತವಾಗಿ ಮುಕ್ತಾಯವಾಗುತ್ತಿದ್ದಂತೆಯೇ ಕೇಂದ್ರ ಸರಕಾರ ವಿದೇಶದಲ್ಲಿ ನೆಲೆಸಿರುವವರನ್ನು ಕರೆತರಲು ಮುಂದಾಗಿತ್ತು. ಇದಕ್ಕಾಗಿ ವಂದೇ ಭಾರತ್ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ.

ಮೇ 7ರಂದು ಆರಂಭಗೊಂಡ ಯೋಜನೆಯಡಿಯಲ್ಲಿ ಇದುವರೆಗೆ ಒಟ್ಟು ನಾಲ್ಕು ಹಂತದ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಬರೋಬ್ಬರಿ 8.78 ಲಕ್ಷ ಭಾರತೀಯರನ್ನು ವಿದೇಶಗಳಿಂದ ವಾಪಸ್​ ಕರೆತರಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಸುಮಾರು 849 ಅಂತಾರಾಷ್ಟ್ರೀಯ ವಿಮಾನಗಳು ಮತ್ತು 234 ಫೀಡರ್​ ಫ್ಲೈಟ್ ಸೇರಿ ಒಟ್ಟು 1083 ವಿಮಾನಗಳನ್ನು ಕಾರ್ಯಾಚರಣೆಗೆ ನಡೆಸಿವೆ. ಏರ್​ ಇಂಡಿಯಾ, ಇಂಡಿಗೋ, ಸ್ಪೈಸ್​ಜೆಟ್​ ಮತ್ತು ಗೋ ಏರ್​ ಸಂಸ್ಥೆಗಳ ವಿಮಾನಗಳನ್ನು ಬಳಸಿಕೊಳ್ಳಲಾಗಿದೆ. ವಂದೇ ಭಾರತ್​ ಮಿಶನ್​​ನ 4ನೇ ಹಂತದಿಂದ 5ನೇ ಹಂತವನ್ನು ಪ್ರಾರಂಭಿಸಲಾಗಿದೆ. ಜು.29ರವರೆಗೆ 8,78,921 ಭಾರತೀಯರು ಸ್ವದೇಶಕ್ಕೆ ಮರಳಿದ್ದಾರೆ ಎಂದು ಇಲಾಖೆ ವಕ್ತಾರ ಅನುರಾಗ್​ ಶ್ರೀವಾಸ್ತವ್​ ತಿಳಿಸಿದ್ದಾರೆ.

ಈಗಾಗಲೇ ನೇಪಾಳ, ಭೂತಾನ್​, ಮಯನ್ಮಾರ್​, ಪಾಕಿಸ್ತಾನ, ಬಾಂಗ್ಲಾದೇಶ, ಯುಎಸ್​ಎ, ಕೆನಡಾ, ಯುಕೆ, ಜರ್ಮನಿ, ಫ್ರಾನ್ಸ್​, ನ್ಯೂಜಿಲ್ಯಾಂಡ್​, ಆಸ್ಟ್ರೇಲಿಯಾ, ಥೈಲ್ಯಾಂಡ್​, ಚೀನಾ, ಇಸ್ರೇಲ್​, ಉಕ್ರೇನ್​, ಕರ್ಜಿಸ್ತಾನ್​​ ದೇಶಗಳಲ್ಲಿ ನೆಲೆಸಿದ್ದ ಭಾರತೀಯರು ಈಗಾಗಲೇ ವಾಪಸ್​ ಆಗಿದ್ದಾರೆ.

ಇದೀಗ ಅಗಸ್ಟ್ 1ರಿಂದ 5ನೇ ಹಂತದ ವಂದೆ ಭಾರತ್ ಮಿಷನ್ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಮತ್ತೆ ಲಕ್ಷಾಂತರ ಮಂದಿ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಮೋದಿ ಸರಕಾರ ಮುಂದಾಗಿದೆ.

Leave A Reply

Your email address will not be published.