ಈ ಸಾವು ನ್ಯಾಯವಲ್ಲ… ಇದೆಲ್ಲ ಅಭಿಮಾನಕ್ಕೆ ಮಾದರಿಯಲ್ಲ ಅಂದಿದ್ಯಾಕೆ ರಾಕಿಂಗ್ ಸ್ಟಾರ್


ಸಾಮಾನ್ಯವಾಗಿ ಅಭಿಮಾನಿಗಳ ಸಾವಿಗೆ ನಟರು ಕಣ್ಣೀರು ಹಾಕಿ ಮನೆಗೆ ಭೇಟಿ ಸಾಂತ್ವನ ಹೇಳೋದು ಕಾಮನ್. ಆದರೆ ಈ ಭಾರಿ ಮಾತ್ರ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಸಾವಿಗೆ ಕೊರಗೋ ಬದಲು ಇದು ಸರಿಯಲ್ಲ ಎಂದಿದ್ದಾರೆ.

ಕೋಡಿದೊಡ್ಡಿಯ ರಾಮಕೃಷ್ಣ ಎಂಬ ಯುವಕ ಬದುಕಿನಲ್ಲಿ ನೊಂದು ಆತ್ಮಹತ್ಯೆಗೆ ಶರಣಾಗೋದಾಗಿ ಡೆತ್ನೋಟ್ ಬರೆದು ಆತ್ಮಹತ್ಯೆ ಗೆ ಶರಣಾಗಿದ್ದ. ಆದರೆ ಡೆತ್ ನೋಟ್ ನಲ್ಲಿ ತನ್ನ ಅಂತ್ಯ ಸಂಸ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ರಾಕಿಂಗ್ ಸ್ಟಾರ್ ಯಶ್ ಬರಬೇಕೆಂದು ಆಗ್ರಹಿಸಿದ್ದ. ಈ ಸುದ್ದಿ ತಿಳಿದ ಯಶ್ ಅಭಿಮಾನಿಯ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಆದರೆ ಈ ಸಾವು ನ್ಯಾಯವಲ್ಲ. ಇದೆಲ್ಲ ಅಭಿಮಾನಕ್ಕೆ ಮಾದರಿಯಲ್ಲ ಎಂದಿದ್ದಾರೆ.

ಅಭಿಮಾನಿಗಳ ಅಭಿಮಾನವೇ ನಮ್ಮ ಬದುಕು.. .ಜೀವನ… ಹೆಮ್ಮೆ. ಆದರೆ ಮಂಡ್ಯದ ಕೋಡಿದೊಡ್ಡಿಯ ರಾಮಕೃಷ್ಣನ ಅಭಿಮಾನಕ್ಕೆ ಹೆಮ್ಮೆ ಪಡಲು ಸಾಧ್ಯವೇ? ಇದು ಅಭಿಮಾನಿಗಳ ಅಭಿಮಾನಕ್ಕೆ ಮಾದರಿಯಾಗದಿರಲಿ. ಕೋಡಿದೊಡ್ಡಿಯ ರಾಮಕೃಷ್ಣ ನ ಆತ್ಮಕ್ಕೆ ಚಿರಶಾಂತಿಸಿಗಲಿ ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ರಾಮಕೃಷ್ಣನ ಡೆತ್ ನೋಟ್ ನಲ್ಲಿ ಬರೆದಂತೆ ಆತನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಆದರೆ ಯಶ್ ಮಾತ್ರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿಲ್ಲ. ಬದಲಾಗಿ ಈ ರೀತಿ ಅಭಿಮಾನ ಸರಿಯಲ್ಲ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಎರಡು ವರ್ಷದ ಹಿಂದೆ ರೆಬೆಲ್ ಸ್ಟಾರ್ ಅಂಬರೀಶ್ ನಿಧನವಾದ ವರ್ಷ ಯಶ್ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಇದರಿಂದ ನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಗೆ ಶರಣಾಗಿದ್ದ. ಈ ವೇಳೆಯೂ ಯಶ್ ನೊಂದುಕೊಂಡಿದ್ದಲ್ಲದೇ ಆತನ ಕುಟುಂಬಕ್ಕೆ ಸಾಂತ್ವನ ಹೇಳಿ ಪರಿಹಾರ ನೀಡಿದ್ದರು. ಆದರೆ ಈ ರೀತಿ ಹುಚ್ಚು ಅಭಿಮಾನ ಸರಿಯಲ್ಲ ಎಂದು ಬುದ್ಧಿ ಹೇಳಿದ್ದರು.

ಈಗ ಮತ್ತೊಬ್ಬ ಅಭಿಮಾನಿ ಸಾವಿನ ಮನೆ ಅತಿಥಿಯಾಗಿದ್ದಾನೆ. ಇತ್ತೀಚಿಗೆ ಯುವಜನತೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೂ ನಟರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳ ಬೇಕೆಂದು ಬಯಸುವ ಪ್ರವೃತ್ತಿ ಹೆಚ್ಚುತ್ತಿದ್ದು ನಟರಿಗೆ ಮುಜುಗರ ಹಾಗೂ ಆತಂಕ ತರುತ್ತಿದೆ.

ನಟ ದರ್ಶನ್ ಸೇರಿದಂತೆ ಹಲವು ನಟರು ಈಗಾಗಲೇ ಅಭಿಮಾನಿಗಳಿಗೆ ಈ ರೀತಿಯ ಹುಚ್ಚು ವರ್ತನೆಗಳು ಸರಿಯಲ್ಲ. ಅಭಿಮಾನ ಬದುಕಿಗಿಂತ ದೊಡ್ಡದಲ್ಲ ಎಂದು ಬುದ್ಧಿ ಹೇಳುತ್ತಲೇ ಇದ್ದಾರೆ. ಹೀಗಿದ್ದರೂ ಮತ್ತೆ ಮತ್ತೆ ಡೆತ್ನೋಟ್ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಅಭಿಮಾನಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಅನ್ನೋ ದು ನಟ-ನಟಿಯರ ಕಾಳಜಿ.

Comments are closed.