ಫೆಬ್ರವರಿಯಿಂದ ಜಾರಿಗೆ ಬಂದಿದೆ ಹೊಸ ನಿಯಮ; 10 ಸೆಕೆಂಡ್‌ನೊಳಗೆ ಈ ಕೆಲಸ ಆಗುತ್ತೆ!
UPI New rules from February 1st: ಭಾರತೀಯ ಪಾವತಿ ಮಾರುಕಟ್ಟೆಯಲ್ಲಿ ಡಿಜಿಟಲ್ ವಹಿವಾಟನ್ನು ಇನ್ನಷ್ಟು ಸುಲಭಗೊಳಿಸಲು ಮತ್ತು ವಂಚನೆಗಳನ್ನು ತಡೆಗಟ್ಟಲು ಫೆಬ್ರವರಿ 1 ರಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಈ ಬದಲಾವಣೆಗಳು ಬಳಕೆದಾರರ ಸುರಕ್ಷತೆ ಮತ್ತು ಪಾವತಿಯ ವೇಗಕ್ಕೆ ಆದ್ಯತೆ ನೀಡಿವೆ.
ವಹಿವಾಟಿನ ವೇಗದಲ್ಲಿ ಹೆಚ್ಚಳ (10 ಸೆಕೆಂಡ್ ಮಿತಿ)
ಹೊಸ ನಿಯಮದ ಪ್ರಕಾರ, ಪ್ರತಿ UPI ವಹಿವಾಟು ಮತ್ತು ಅದರ API ಪ್ರತಿಕ್ರಿಯೆಗಳು ಕೇವಲ 10 ಸೆಕೆಂಡ್‌ಗಳೊಳಗೆ ಪೂರ್ಣಗೊಳ್ಳಬೇಕು. ಈ ಮೊದಲು ಇದು 30 ಸೆಕೆಂಡ್‌ಗಳಷ್ಟಿತ್ತು. ಇದರಿಂದಾಗಿ ಹಣ ಪಾವತಿಸುವಾಗ ಉಂಟಾಗುತ್ತಿದ್ದ ವಿಳಂಬ ಕಡಿಮೆಯಾಗಲಿದ್ದು, ಜನದಟ್ಟಣೆಯ ಸಮಯದಲ್ಲೂ ಪಾವತಿ ವೇಗವಾಗಿ ನಡೆಯಲಿದೆ.
ನಿಷ್ಕ್ರಿಯ (Dormant) UPI ಐಡಿಗಳ ಮೇಲೆ ನಿರ್ಬಂಧ
ನೀವು ದೀರ್ಘಕಾಲದವರೆಗೆ ಯಾವುದೇ ವಹಿವಾಟು ನಡೆಸದ ‘ನಿಷ್ಕ್ರಿಯ’ UPI ಐಡಿಗಳನ್ನು ಹೊಂದಿದ್ದರೆ, ಅವುಗಳ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗುತ್ತದೆ. ಅಂತಹ ಐಡಿಗಳನ್ನು ಮತ್ತೆ ಬಳಸಲು ಬಳಕೆದಾರರು ಮರು-ದೃಢೀಕರಣ (Re-verification) ಮಾಡಿಕೊಳ್ಳುವುದು ಕಡ್ಡಾಯ. ಹಳೆಯ ಖಾತೆಗಳ ದುರ್ಬಳಕೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.
ವಿಫಲವಾದ ಪಾವತಿಗಳ ತ್ವರಿತ ಪರಿಹಾರ
ಪಾವತಿ ಮಾಡುವಾಗ ಹಣ ಕಟ್ ಆಗಿ, ವಹಿವಾಟು ಪೆಂಡಿಂಗ್ ಅಥವಾ ವಿಫಲವಾದರೆ, ಬ್ಯಾಂಕ್‌ಗಳು ಮತ್ತು ಆ್ಯಪ್‌ಗಳು ಇನ್ನು ಮುಂದೆ ಕೆಲವೇ ಗಂಟೆಗಳಲ್ಲಿ ಅದನ್ನು ಸರಿಪಡಿಸಬೇಕು. ಗ್ರಾಹಕರಿಗೆ ವಹಿವಾಟಿನ ಸ್ಥಿತಿಯ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಬೇಕೆಂದು ಸೂಚಿಸಲಾಗಿದೆ.
ಹೆಚ್ಚಿನ ಭದ್ರತೆ ಮತ್ತು ದೃಢೀಕರಣ
ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮಾಡುವಾಗ ಈಗ ಹೆಚ್ಚಿನ ಭದ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಹಣ ಕಳುಹಿಸುವ ಮುನ್ನ ಬರುವ ಪಾವತಿ ಸೂಚನೆಗಳು ಈಗ ಇನ್ನಷ್ಟು ಸ್ಪಷ್ಟವಾಗಿರಲಿವೆ. ಚಂದಾದಾರಿಕೆ ಅಥವಾ ಆಟೋಮ್ಯಾಟಿಕ್ ಹಣ ಕಟ್ ಆಗುವ ಪ್ರಕ್ರಿಯೆಯನ್ನು ಬಳಕೆದಾರರು ಸುಲಭವಾಗಿ ರದ್ದುಗೊಳಿಸುವ ಸೌಲಭ್ಯವನ್ನೂ ನೀಡಲಾಗಿದೆ.
ಸ್ಪ್ಯಾಮ್ ತಡೆಗೆ ‘ಕಲೆಕ್ಟ್ ರಿಕ್ವೆಸ್ಟ್’ ಮಿತಿ
ಬೇರೆಯವರಿಂದ ಹಣಕ್ಕಾಗಿ ಬರುವ ‘ಕಲೆಕ್ಟ್ ರಿಕ್ವೆಸ್ಟ್’ ಮೂಲಕ ನಡೆಯುವ ವಂಚನೆ ತಡೆಯಲು ಮಿತಿ ಹೇರಲಾಗಿದೆ. ಅಪರಿಚಿತರಿಂದ ಬರುವ ಇಂತಹ ರಿಕ್ವೆಸ್ಟ್‌ಗಳ ಬಗ್ಗೆ ಆ್ಯಪ್‌ಗಳು ಎಚ್ಚರಿಕೆ ನೀಡಲಿವೆ ಮತ್ತು ದಿನಕ್ಕೆ ಎಷ್ಟು ರಿಕ್ವೆಸ್ಟ್ ಕಳುಹಿಸಬಹುದು ಎಂಬುದಕ್ಕೆ ಮಿತಿ ಇರಲಿದೆ.



