ಖಾತೆಗೆ ತಪ್ಪಾಗಿ ಹಣ ಬಂದರೆ ಏನು ಮಾಡಬೇಕು? ಬ್ಯಾಂಕ್ಗೆ ತಿಳಿಸದಿದ್ದರೆ ಏನಾಗುತ್ತದೆ
ಡಿಜಿಟಲ್ ಬ್ಯಾಂಕಿಂಗ್ ಹೆಚ್ಚಾದಂತೆ ತಪ್ಪಾಗಿ ಬೇರೆ ಖಾತೆಗೆ ಹಣ ಜಮೆಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಅಂತಹ ಹಣವನ್ನು ಬಳಸಿದರೆ ತೆರಿಗೆ, ದಂಡ ಹಾಗೂ ಕಾನೂನು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.

ಇತ್ತೀಚಿನ ದಿನಗಳಲ್ಲಿ ಯುಪಿಐ, ನೆಟ್ ಬ್ಯಾಂಕಿಂಗ್ ಹಾಗೂ ಐಎಂಪಿಎಸ್ ವಹಿವಾಟು ಹೆಚ್ಚಾಗಿರುವ ಕಾರಣ ತಪ್ಪಾಗಿ ಬೇರೆ ಖಾತೆಗೆ ಹಣ ಜಮೆಯಾಗುವ ಘಟನೆಗಳು ಹೆಚ್ಚಾಗುತ್ತಿವೆ. ಅನೇಕರು ಅಕಸ್ಮಾತ್ ಖಾತೆಗೆ ಬಂದ ಹಣವನ್ನು ಬಳಸಬಹುದೇ ಅಥವಾ ಅದರ ಮೇಲೆ ತೆರಿಗೆ ಬೀಳುತ್ತದೆಯೇ ಎಂಬ ಗೊಂದಲದಲ್ಲಿದ್ದಾರೆ.
ಆರ್ಥಿಕ ತಜ್ಞರ ಪ್ರಕಾರ, ಬ್ಯಾಂಕಿಂಗ್ ದೋಷದಿಂದ ಖಾತೆಗೆ ಜಮೆಯಾದ ಹಣ ಸ್ವಯಂಚಾಲಿತವಾಗಿ ಆದಾಯ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಖಾತೆದಾರರಿಗೆ ಅದು ತಮ್ಮ ಹಣ ಅಲ್ಲ ಎಂಬುದು ಗೊತ್ತಿದ್ದರೂ ಬಳಸಿದರೆ ಸಮಸ್ಯೆ ಎದುರಾಗಬಹುದು.
ಖಾತೆಗೆ ಅಪರಿಚಿತ ಮೂಲದಿಂದ ಹಣ ಬಂದ ಕೂಡಲೇ ಬ್ಯಾಂಕ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡುವುದು ಅತ್ಯಂತ ಮುಖ್ಯ. ಇಮೇಲ್, ಬ್ಯಾಂಕ್ ದೂರು ಸಂಖ್ಯೆ ಅಥವಾ ಸ್ಟೇಟ್ಮೆಂಟ್ಗಳ ಪ್ರತಿಗಳನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕು. ಇದರಿಂದ ಮುಂದಿನ ದಿನಗಳಲ್ಲಿ ಯಾವುದೇ ತನಿಖೆ ನಡೆದರೂ ತಮ್ಮ ಬಳಿ ದಾಖಲೆ ಇರುತ್ತದೆ.
ಒಂದು ವೇಳೆ ಆ ಹಣವನ್ನು ಖರ್ಚು ಮಾಡುವುದು, ಬೇರೆ ಖಾತೆಗೆ ವರ್ಗಾವಣೆ ಮಾಡುವುದು ಅಥವಾ ಮರೆಮಾಚಲು ಪ್ರಯತ್ನಿಸಿದರೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರುವ ಸಾಧ್ಯತೆ ಇದೆ. ಇನ್ಕಮ್ ಟ್ಯಾಕ್ಸ್ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಅದನ್ನು ವಿವರಿಸಲಾಗದ ಆದಾಯ ಎಂದು ಪರಿಗಣಿಸಬಹುದು.
ಈ ರೀತಿಯ ಪ್ರಕರಣಗಳಲ್ಲಿ ಸರಿಯಾದ ದಾಖಲೆ ನೀಡಲು ವಿಫಲವಾದರೆ 60 ಶೇಕಡಾ ತನಕ ತೆರಿಗೆ, ಹೆಚ್ಚುವರಿ ಸರ್ಚಾರ್ಜ್, ಸೆಸ್ ಹಾಗೂ ದಂಡ ವಿಧಿಸುವ ಸಾಧ್ಯತೆ ಇದೆ. ಆದ್ದರಿಂದ ಖಾತೆಗೆ ತಪ್ಪಾಗಿ ಬಂದ ಹಣವನ್ನು ಬಳಸದೆ, ಸರಿಯಾದ ಬ್ಯಾಂಕಿಂಗ್ ವಿಧಾನದಲ್ಲಿ ಹಿಂದಿರುಗಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ ಪ್ರತಿಯೊಂದು ವ್ಯವಹಾರವೂ ದಾಖಲಾಗುತ್ತದೆ. ಹೀಗಾಗಿ “ತಪ್ಪಾಗಿ ಬಂದ ಹಣ” ಎನ್ನುವ ಕಾರಣ ಹೇಳಿ ನಿರ್ಲಕ್ಷ್ಯ ಮಾಡುವುದಕ್ಕಿಂತ ಪಾರದರ್ಶಕವಾಗಿ ನಡೆದುಕೊಳ್ಳುವುದು ಸುರಕ್ಷಿತ ಮಾರ್ಗವಾಗಿದೆ.



