ರಿಲೀಸ್ ಗೆ ರೆಡಿಯಾದ್ರೂ ತೆರೆಗೆ ಬರ್ತಿಲ್ಲ ರಾಬರ್ಟ್…! ಸಿನಿಮಾ ಬಿಡುಗಡೆ ಬಗ್ಗೆ ದಚ್ಚು ಲೆಕ್ಕಾಚಾರವೇನು ಗೊತ್ತಾ?!

ಯಜಮಾನ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ. ಅನ್ನೋ ಹಾಗೇ ಚಿತ್ರ ಸಿದ್ಧವಾಗಿದ್ದರೂ ಚಿತ್ರತಂಡ ರಿಲೀಸ್ ಗೆ ಮೀನಾಮೇಷ ಎಣಿಸುತ್ತಿದ್ದು ಅಭಿಮಾನಿಗಳು ಮಾತ್ರ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಅಣ್ಣನ ಸಿನಿಮಾ ಯಾವಾಗ ಬರುತ್ತೆ ಅಂತ ಕಾಯ್ತಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ ದರ್ಶನ್ ಅಭಿನಯದ ಬಹುನೀರಿಕ್ಷಿತ ಚಿತ್ರ ರಾಬರ್ಟ್ ನವರಾತ್ರಿ ವೇಳೆಗೆ ಚಿತ್ರಮಂದಿರಕ್ಕೆ ಲಗ್ಗೆ ಇಡಬೇಕಿತ್ತು. ಆದರೆ ಅನಿರೀಕ್ಷಿತವಾಗಿ ಬಂದ ಕೊರೋನಾ ಎಲ್ಲ ಲೆಕ್ಕಾಚಾರ ಬುಡಮೇಲು ಮಾಡಿದೆ. ಆದರೆ ಈಗ ಕೊರೋನಾ ಎಫೆಕ್ಟ್ ಕೊಂಚ ತಣ್ಣಗಾಗಿ ಜನಜೀವನ ಸಹಜಸ್ಥಿತಿಗೆ ಬಂದು ಥೀಯೇಟರ್ ಗಳು ಬಾಗಿಲು ತೆರೆದ್ರೂ ಚಿತ್ರ ಬಿಡುಗಡೆಗೆ ಸಿನಿಮಾತಂಡ ಹಿಂದೆಟು ಹಾಕ್ತಿದ್ದು, ನಿರ್ಮಾಪಕ,ನಿರ್ದೇಶಕ,ನಟ ಯಾರೂ ಕೂಡ ಚಿತ್ರವನ್ನು ಥಿಯೇಟರ್ ಗೆ ಬಿಟ್ಟು ಅದೃಷ್ಟ ಪರೀಕ್ಷೆಗೆ ಸಿದ್ಧವಿಲ್ಲ.

ಮೂಲಗಳ ಪ್ರಕಾರ ರಾಬರ್ಟ್ ಹೆಸರಿಗೆ ತಕ್ಕಂತೆ ಚಿತ್ರವನ್ನು ಡಿಸೆಂಬರ್ 25 ಕ್ರಿಸ್ ಮಸ್ ಗೆ ರಿಲೀಸ್ ಮಾಡಲು ಚಿಂತನೆ ನಡೆದಿದೆಯಂತೆ. ಆದರೆ ಇನ್ನೊಂದೆಡೆ ಈಗ ಬಾಗಿಲು ತೆರೆದ ಥಿಯೇಟರ್ ಗಳಲ್ಲಿ ಜನರ ರೆಸ್ಪಾನ್ಸ್ ನೋಡಿಕೊಂಡು ನವೆಂಬರ್ ಮಧ್ಯಭಾಗದಲ್ಲಿ ದೀಪಾವಳಿಗೆ ಚಿತ್ರ ರಿಲೀಸ್ ಮಾಡಲು ಪ್ಲ್ಯಾನ್ ನಡೆದಿದೆ. ಆದರೆ ಇನ್ನೂ ರಾಬರ್ಟ್ ಯಾವಾಗ ತೆರೆಗೆ ಬರಲಿದೆ ಅನ್ನೋದರ ಬಗ್ಗೆ ಖಚಿತವಾದ ನಿರ್ಧಾರಕ್ಕೆ ಬರೋದಿಕ್ಕೆ ಚಿತ್ರತಂಡಕ್ಕೆ ಸಾಧ್ಯವಾಗಿಲ್ಲ.

ದರ್ಶನ್ ಸಿನಿಮಾ ದೃಷ್ಟಿಯಿಂದ ಮಲ್ಟಿಫ್ಲೆಕ್ಸ ಗಳಿಗಿಂತ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಿಗೆ ಜನ ಬರೋದು ಮುಖ್ಯ. ಥಿಯೇಟರ್ ಗಳು ಬಾಗಿಲು ತೆರೆದಿದ್ದರೂ ಜನರು ಇನ್ನು ಮೊದಲಿನಂತೆ ಸಿನಿಮಾ ವೀಕ್ಷಣೆಗೆ ಮನಸ್ಸು ಮಾಡ್ತಿಲ್ಲ. ಹೀಗಾಗಿ ಕೋಟ್ಯಾಂತರ ರೂಪಾಯಿ ಬಜೆಟ್ ನ ಸಿನಿಮಾ ರಿಲೀಸ್ ಮಾಡಿ ಕೈಸುಟ್ಟುಕೊಳ್ಳೋಕೆ ಚಿತ್ರತಂಡ ಸಿದ್ಧವಿಲ್ಲ.

ದರ್ಶನ್ , ಯಾರಿಗೂ ತೊಂದರೆಯಾಗದಂತೆ, ಯಾವ ಚಿತ್ರದ ಡೇಟ್ಸ್ ಗೂ ಕ್ಲ್ಯಾಶ್ ಆಗದಂತೆ ಚಿತ್ರ ಬಿಡುಗಡೆ ಮಾಡೋಣ. ನಮ್ಮಿಂದ ಯಾರಿಗೂ ತೊಂದರೆ ಆಗೋದು ಬೇಡ ಅಂತಿದ್ದಾರಂತೆ. ಇನ್ನು ನಿರ್ಮಾಪಕ ಉಮಾಪತಿಶ್ರೀನಿವಾಸ್ , ದರ್ಶನ್ ಸರ್ ಒಪ್ಪಿಕೊಂಡ ತಕ್ಷಣ ರಿಲೀಸ್ ಮಾಡ್ತೇವೆ. ನಾವಿನ್ನು ಒಂದು ವರ್ಷ ಬಿಟ್ಟು ರಿಲೀಸ್ ಮಾಡೋಕು ರೆಡಿ ಎನ್ನುವ ಮೂಲಕ ಕಾಯ್ದು ನೋಡೋ ತಂತ್ರದ ಮುನ್ಸೂಚನೆ ನೀಡಿದ್ದಾರೆ.

ಮೂಲಗಳ ಪ್ರಕಾರ ರಾಬರ್ಟ್ ಮತ್ತು ಕೆಜಿಎಫ್-2 ಚಿತ್ರದ ನಡುವೆ ಥಿಯೇಟರ್ ಫೈಟ್ ತಪ್ಪಿಸೋಕೆ ಚಿತ್ರತಂಡ ಸರ್ಕಸ್ ನಡೆಸಿದ್ದು, ಕೆಜಿಎಫ್ ಯಾವಾಗ ಥಿಯೇಟರ್ ಗೆ ಬರಲಿದೆ ಅನ್ನೋದರ ಮೇಲೆ ರಾಬರ್ಟ್ ಭವಿಷ್ಯ ನಿರ್ಧಾರವಾಗಲಿದೆ ಅಂತಿದ್ದಾರೆ ಗಾಂಧಿನಗರ ಮಂದಿ.

Comments are closed.