KGF ಖ್ಯಾತಿಯ, ಕನ್ನಡ ಖಳನಟ ಹರೀಶ್ ರಾಯ್ ನಿಧನ
KGF Harish Rai: ಕಳೆದ ಕೆಲ ವರ್ಷಗಳಿಂದ ತಮ್ಮ ಅನಾರೋಗ್ಯ ಕಾರಣದಿಂದಲೇ ಸುದ್ದಿಯಲ್ಲಿದ್ದ ಚಂದನವನದ ಖ್ಯಾತ ಖಳನಟ ಹರೀಶ್ ರಾಯ್ ಇಂದು ನಿಧನರಾಗಿದ್ದಾರೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರು ಕೆಜಿಎಫ್ ಸಿನಿಮಾದ ಬಳಿಕ ಕೆಜಿಎಫ್ ಚಾಚಾ ಎಂದೇ ಖ್ಯಾತಿ ಪಡೆದಿದ್ದರು.
ಕಳೆದ ಒಂದು ತಿಂಗಳಿನಿಂದ ನಟ ಹರೀಶ್ ರಾಯ್ ಕಿದ್ವಾಯಿ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದು ಎನ್ನಲಾಗಿದೆ. ಕ್ಯಾನ್ಸರ್ ನಿಂದಾಗಿ ಹರೀಶ್ ರಾಯ್ ಅವರ ದೇಹವೇ ಬದಲಾಗಿ ಹೋಗಿತ್ತು. ಕ್ಯಾನ್ಸರ್ ವಿರುದ್ಧ ನಿರಂತರ ಹೋರಾಟ ನಡೆಸುತ್ತಲೇ ಬಂದ ಹರೀಶ್ ರಾಯ್ ಇಂದು ಕ್ಯಾನ್ಸರ್ ಕಾಯಿಲೆಯ ವಿರುದ್ಧ ಮಂಡಿಯೂರಿದ್ದಾರೆ.
ಚಿಕಿತ್ಸೆಗಾಗಿ ಹರೀಶ್ ರಾಯ್ ಆರ್ಥಿಕ ಸಹಾಯಕ್ಕೆ ಅಂಗಲಾಚಿದ್ದರು. ಈ ಸಂದರ್ಭದಲ್ಲಿ ನಟ ಯಶ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸೇರಿದಂತೆ ಅನೇಕರು ಹರೀಶ್ ರಾಯ್ ಅವರ ನೆರವಿಗೆ ಧಾವಿಸಿದ್ದರು. ಆದರೆ ಅವರೆಲ್ಲರ ಪ್ರಯತ್ನ ಇಂದು ವ್ಯರ್ಥವಾಗಿದೆ.
ಮೂಲತಃ ಕರಾವಳಿಯವರಾದ ಹರೀಶ್ ರಾಯ್ ಅವರು ಜೋಡಿಹಕ್ಕಿ, ನನ್ನ ಕನಸಿನ ಹೂವೇ, ಸಂಜು ವೆಡ್ಸ್ ಗೀತಾ, ತಾಯವ್ವ, ಓಂ, ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬಹುಭಾಷಾ ನಟರಾಗಿದ್ದ ಹರೀಶ್ ರಾಯ್ ತಮಿಳು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದರು. ಹರೀಶ್ ರಾಯ್ ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರ ಹೊಟ್ಟೆಯಲ್ಲಿ ನೀರು ತುಂಬಿಕೊಂಡು ಹೊಟ್ಟೆಯುಬ್ಬರಿಸಿ ಹೋಗಿತ್ತು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಕನ್ನಡ ಚಿತ್ರರಂಗ, ಯುಟ್ಯೂಬರ್ಸ್, ಖ್ಯಾತ ನಟರ ಅಭಿಮಾನಿ ಬಳಗ ಸೇರಿದಂತೆ ಹಲವು ಕಡೆಗಳಿಂದ ಅವರಿಗೆ ಸಹಾಯಹಸ್ತ ಒದಗಿ ಬಂದಿತ್ತು.
ಇದನ್ನೂ ಓದಿ: ಗಿಲ್ಲಿ-ಕಾವ್ಯ ಸ್ನೇಹಕ್ಕೆ ಸವಾಲು! ಯಾರು ತಗೋತಾರೆ ಮನೆಯಿಂದ ಬಂದ ಪತ್ರವನ್ನು?



