Puneeth Raj Kumar Statue : ತಂದೆಯ ಪಕ್ಕ ಪುತ್ರ ಅಮರ: ಬಿಬಿಎಂಪಿ ಆವರಣದಲ್ಲಿ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ

ಬೆಂಗಳೂರು ಮಹಾನಗರ ಪಾಲಿಕೆಯ ಆವರಣದಲ್ಲಿ ಡಾ.ರಾಜ್ ಪುತ್ಥಳಿ ಕನ್ನಡಿಗರ ಹೆಮ್ಮೆಯ ದ್ಯೋತಕವಾಗಿ ನಿಂತಿದೆ. ಇದೇ ಪುತ್ಥಳಿಯ ಪಕ್ಕದಲ್ಲಿ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುತ್ಥಳಿ ( Puneeth Raj Kumar Statue) ಕೂಡ ನಿರ್ಮಾಣವಾಗಲಿದ್ದು, ಇನ್ನೇನು ಪ್ರತಿಮೆಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿಕೆಗೆ ಇನ್ನೇನು ಒಂದು ತಿಂಗಳು ತುಂಬಲಿದೆ. ಈ ಹೊತ್ತಿ ನಲ್ಲೇ ಅವರ ನೆನಪುಗಳನ್ನು ಅಮರವಾಗಿಸಲು ಅಭಿಮಾನಿಗಳು ನೊರೆಂಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಪೈಕಿ ಬಿಬಿಎಂಪಿ ನೌಕರರ ಸಂಘವೂ ಸರ್ಕಾರದ ಅನುಮತಿಯೊಂದಿಗೆ ಪುನೀತ್ ಪುತ್ಥಳಿಯನ್ನು ಬಿಬಿಎಂಪಿ ಆವರಣದಲ್ಲಿ ನಿಲ್ಲಿಸಲು ಸಜ್ಜಾಗಿದೆ.

ಈಗಾಗಲೇ ಪುತ್ಥಳಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು ಸದ್ಯದಲ್ಲೇ ಅದ್ದೂರಿ ಕಾರ್ಯಕ್ರಮದಲ್ಲಿ ಪುನೀತ್ ಹಾಗೂ ಡಾ.ರಾಜ್ ಕುಟುಂಬಸ್ಥರ ಸಮ್ಮುಖದಲ್ಲಿ ಬಿಬಿಎಂಪಿಯ ಆವರಣದಲ್ಲಿ ಪುನೀತ್ ಪುತ್ಥಳಿ ಅನಾವರಣಗೊಳ್ಳಲಿದೆ. ಹಲವು ಹಿರಿಯರ ಪುತ್ಥಳಿ ಗಳನ್ನು ನಿರ್ಮಿಸಿದ ಅನುಭವ ಉಳ್ಳ ಬೆಂಗಳೂರಿನ ಹಿರಿಯ ಶಿಲ್ಪ ಕಲಾವಿದ ಸಪ್ತತಿ ಕ್ರಿಯೇಷನ್ಸ್ ನ ನಾ ಶಿವದತ್ತ ಪುನೀತ್ ಪುತ್ಥಳಿ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಪುನೀತ್ ನಿಧನದ ಬಳಿಕ ಅವರ ಪುತ್ಥಳಿಗೆ ಸಾಕಷ್ಟು ಬೇಡಿಕೆ ಇದ್ದು ಜನರು, ಅಭಿಮಾನಿಗಳು, ಸಂಘ ಸಂಸ್ಥೆಗಳು ವಿವಿಧ ಅಳತೆಯ ಪುನೀತ್ ಪುತ್ಥಳಿಗಾಗಿ ಆರ್ಡರ್ ನೀಡಿದ್ದಾರಂತೆ.

ಬಿಬಿಎಂಪಿ ಆವರಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಪುನೀತ್ ಪುತ್ಥಳಿ ಇನ್ನೇನು ಅಂತಿಮ ಹಂತದಲ್ಲಿದ್ದು ಅದನ್ನು ನಟ ರಾಘವೇಂದ್ರ ರಾಜಕುಮಾರ ವೀಕ್ಷಣೆ ನಡೆಸಿದ್ದಾರೆ. ಅಲ್ಲದೇ ಚಿಕ್ಕಪುಟ್ಟ ಬದಲಾವಣೆಗಳನ್ನು ಶಿಲ್ಪಿಗೆ ಸೂಚಿಸಿದ್ದಾರಂತೆ. ಡಾ.ರಾಜ್ ಪುತ್ಥಳಿಯನ್ನು ಈ ಹಿಂದೆ ಶಿವದತ್ ಅವರೇ ನಿರ್ಮಿಸಿದ್ದರಂತೆ. ಆಗಲೂ ಶಿವಣ್ಣ ತಂದೆಯವರ ಪುತ್ಥಳಿ ನೋಡಲು ಬಂದಿದ್ದರಂತೆ. ಈಗ ತಮ್ಮನ ಪ್ರತಿಮೆ ನೋಡಲು ಬರುವಂತಾಯಿತು ಎಂದು ರಾಘಣ್ಣ ಕಣ್ಣೀರಾದರು.ಅಲ್ಲದೇ ಪುನೀತ್ ಅವಸರದಲ್ಲಿ ಹೋಗಿದ್ದಾನೆ. ಆದರೆ ನೀವು ಪುತ್ಥಳಿ ಕೆತ್ತನೆಯಲ್ಲಿ ಯಾವುದೇ ಅವಸರ ಮಾಡಬೇಡಿ ಎಂದು ಕಾಳಜಿ ತೋರಿದ್ದಾರೆ.

ಪುನೀತ್ ರಂತೆ ತೋರುವ ಪುತ್ಥಳಿಯನ್ನು ಕಂಡು ಭಾವುಕರಾದ ರಾಘಣ್ಣ ಆ ಪ್ರತಿಮೆಗೆ ಮುತ್ತನಿತ್ತು ತಮ್ಮ ಸಹೋದರ ಪ್ರೇಮ ತೋರಿದ್ದಾರೆ. ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಈ ಪುತ್ಥಳಿ ನಿರ್ಮಾಣ ಹಾಗೂ ಸ್ಥಾಪನೆಯ ಹೊಣೆಗಾರಿಕೆ ಹೊತ್ತಿದ್ದು ಅವರು ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ನಗರದ ಹಲವೆಡೆ ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಆದರೆ ಪುತ್ಥಳಿ ನಿರ್ಮಾಣಕ್ಕೂ ಮುನ್ನ ಅನುಮತಿ ಹಾಗೂ ನಿಯಮ ಪಾಲನೆ ಕಡ್ಡಾಯ ಎಂದು ಬಿಬಿಎಂಪಿ ಈಗಾಗಲೇ ಅಭಿಮಾನಿಗಳಿಗೆ ಎಚ್ಚರಿಸಿದೆ.

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್‌ಗೆ ಕರ್ನಾಟಕ ರತ್ನ : ಸಿಎಂ ಬಸವರಾಜ್‌ ಬೊಮ್ಮಾಯಿ ಘೋಷಣೆ

ಇದನ್ನೂ ಓದಿ : ಬೆಳ್ಳಿ ತೆರೆಗೆ ಬಾಲನಟನ‌ ಬದುಕು: ಪುನೀತ್‌ ರಾಜ್‌ ಕುಮಾರ್‌ ಬಯೋಪಿಕ್ ರೂಪದಲ್ಲಿ ಪವರ್ ಚರಿತ್ರೆ

( father Raj Kumar statue besides his Puneeth Raj Kumar statue)

Comments are closed.