ಮಲ್ಪೆ ಕಡಲತೀರದಲ್ಲಿ ಪ್ಲಾಸ್ಟಿಕ್‌ಗಳದ್ದೇ ರಾಶಿ…! ಪ್ಲಾಸ್ಟಿಕ್ ತ್ಯಾಜ್ಯದಿಂದ ಮೀನುಗಾರಿಕೆಗೆ ಆತಂಕ

ಉಡುಪಿ : ಪ್ಲಾಸ್ಟಿಕ್ ಬ್ಯಾನ್ ಆದ್ರೂ, ಬಳಕೆ ಮಾತ್ರ ಕಡಿಮೆಯಾಗಿಲ್ಲ. ಪ್ಲಾಸ್ಟಿಕ್‌ ಬಳಕೆಯಿಂದಾಗಿ ನದಿಗಳು, ಸಮುದ್ರ ತೀರಗಳು ಪ್ಲಾಸ್ಟಿಕ್ ಮಯವಾಗಿದೆ. ಇದೀಗ ಪ್ರವಾಸಿಗರ ಹಾಟ್‌ ಸ್ಪಾಟ್‌ ಎನಿಸಿಕೊಂಡಿರುವ ಉಡುಪಿ ಮಲ್ಪೆ ಬೀಚ್‌ ಇದೀಗ ಪ್ಲಾಸ್ಟಿಕ್‌ ರಾಶಿಯಿಂದಲೇ ತುಂಬಿಕೊಂಡಿದೆ.

ಜನರು ಚರಂಡಿ, ನದಿಗಳಿಗೆ ಎಸೆಯುವ ಕಸ ನದಿಯ ಮೂಲಕ ಸಮುದ್ರವನ್ನು ಸೇರುತ್ತದೆ. ಸಮುದ್ರದ ಅಲೆಗಳಲ್ಲಿ ಮತ್ತೆ ಅದೇ ಕಸ ಕಡಲ ತೀರಕ್ಕೆ ಬಂದು ಸೇರುತ್ತದೆ. ಇದರಿಂದ ಸಮುದ್ರ ಪರಿಸರ ಮಾಲಿನ್ಯವಾಗುತ್ತಿದೆ. ಅಲ್ಲದೇ ಇದೇ ಕಸವನ್ನು ಮೀನುಗಳು ತಿನ್ನುವುದರಿಂದ ಮೀನಿನ ಸಂತತಿಯು ಕ್ಷೀಣಿಸುತ್ತಿದೆ.

ಮಲ್ಪೆ ಬೀಚ್ ನಿರ್ವಾಹಕರು ಕೆಲ ದಿನಗಳ ಹಿಂದೆ ಅಷ್ಟೇ ಅರ್ಧ ಕಿ.ಮೀ ವ್ಯಾಪ್ತಿಯ ಕಡಲತೀರವನ್ನು ಸ್ವಚ್ಚ ಮಾಡಿಸಿದ್ದರು. ಆ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಟನ್‌ಗಳಷ್ಟು ಕಸ ಸಂಗ್ರಹ ವಾಗಿತ್ತು. ಇದೀಗ ಮತ್ತೆ ಅಷ್ಟೇ ಪ್ರಮಾಣದಲ್ಲಿ ತ್ಯಾಜ್ಯರಾಶಿ ಬಿದ್ದಿದೆ. ಕಸದ ರಾಶಿಯಲ್ಲಿ ತೆಂಗಿನಕಾಯಿ ಸಹಿತ ಕೆಲವೊಂದು ಉಪಯುಕ್ತ ವಸ್ತುಗಳು ಸೇರಿವೆ. ಇದನ್ನು ಕೆಲವರು ಬೆಳ್ಳಂಬೆಳಗ್ಗೆ ಮನೆಗೆ ಕೊಂಡೊಯ್ಯುತ್ತಾರೆ.

ಕಸದ ರಾಶಿಯಲ್ಲಿ ಪ್ಲಾಸ್ಟಿಕ್ ಬಾಟಲಿ, ಚಪ್ಪಲಿ ಅಧಿಕ ಪ್ರಮಾಣದಲ್ಲಿದೆ. ತೀರದ ಉದ್ದಕ್ಕೂ ಹರಡಿಕೊಂಡ ತ್ಯಾಜ್ಯದ ದುರ್ವಾಸನೆಯಿಂದ ಇಲ್ಲಿ ವಾಕಿಂಗ್ ತೆರಳುವವರಿಗೆ ನಡೆದಾಡಲು ಕಷ್ಟ ಎನ್ನುತ್ತಿದ್ದಾರೆ. ಸಮುದ್ರ ಪರಿಸರ ಮಾಲಿನ್ಯ ತಡೆಗಟ್ಟಲು ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರ ಪ್ರಿಯರ ಆಗ್ರಹವಾಗಿದೆ.

ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಹಲವು ಬಾರಿ ಮೀನಿನ ಜೊತೆ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯಗಳು ಬಲೆಗೆ ಬೀಳುತ್ತದೆ. ವಿಷಕಾರಿ ಕಸಗಳಿಂದ ಸಾಂಪ್ರದಾಯಿಕ ಮೀನುಗಾರಿಕೆ ಗೂ ಧಕ್ಕೆಯಾಗಲಿದೆ. ಕಸವನ್ನು ಸಮುದ್ರಕ್ಕೆ ಸೇರಲು ಬಿಡದೆ ನೆಲದಲ್ಲಿಯೇ ವಿಲೇವಾರಿ ಮಾಡುವ ಹಾಗೆ ಆಡಳಿತ ಮಂಡಳಿ ಕ್ರಮ ತೆಗೆದು ಕೊಳ್ಳಬೇಕೆನ್ನುವ ಆಗ್ರಹ ಕೇಳಿಬಂದಿದೆ.

Comments are closed.