ಹಿಜಾಬ್‌ ವಿವಾದ : ಕುಂದಾಪುರ ಕಾಲೇಜಿಗೆ ರಜೆ ಘೋಷಣೆ

ಕುಂದಾಪುರ : ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದ (Hijab Row) ಕುಂದಾಪುರದಲ್ಲಿ ತಾರಕಕ್ಕೇರಿದೆ. ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ಪ್ರಾಂಶುಪಾಲರು ನಿರಾಕರಿಸಿದ ಬೆನ್ನಲ್ಲೇ ವಿದ್ಯಾರ್ಥಿನಿಯರು ಹಾಗೂ ಪೋಷಕರು ಕಾಲೇಜು ಮೈದಾನದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಉಡುಪಿಯಲ್ಲಿ ಹುಟ್ಟಿಕೊಂಡಿದ್ದ ಹಿಜಾಬ್‌ ವಿವಾದ ಇದೀಗ ಕುಂದಾಪುರ, ಬೈಂದೂರಿಗೂ ವ್ಯಾಪಿಸಿದೆ. ಕುಂದಾಪುರ ಪದವಿ ಪೂರ್ವ ಕಾಲೇಜಿನಲ್ಲಿ ನಿನ್ನೆಯಿಂದಲೇ ವಿದ್ಯಾರ್ಥಿನಿ ಯರು ಹಿಜಾಬ್‌ ಧರಿಸಿ ತರಗತಿ ಪ್ರವೇಶಕ್ಕೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಪೋಷಕರು ಕೂಡ ವಿದ್ಯಾರ್ಥಿನಿಯರಿಗೆ ಸಾಥ್‌ ಕೊಟ್ಟಿದ್ದಾರೆ. ಈ ನಡುವಲ್ಲೇ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮೈದಾನದಲ್ಲಿಯೇ ಮೊಕ್ಕಾಂ ಹೂಡಿದ್ದರು. ಮಧ್ಯಾಹ್ನದ ಊಟದ ನಂತರ ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಕೈಬಿಟ್ಟು ಮನೆಗೆ ತೆರಳಿದ್ದಾರೆ. ಸೋಮವಾರ ಮತ್ತೆ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಯಿದೆ. ಇನ್ನು ಕೆಲವು ಸಂಘಟನೆಯ ಮುಖಂಡರು ಪ್ರತಿಭಟನಾನಿರತ ವಿದ್ಯಾರ್ಥಿನಿಯರಿಗೆ ಊಟ ತಂದು ಕೊಟ್ಟಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

ಕಾಲೇಜಿನ ಆಡಳಿತ ಮಂಡಳಿ ಮುನ್ನೆಚ್ಚರಿಕಾ ಕ್ರಮವಾಗಿ ನಾಳೆ ಕಾಲೇಜಿಗೆ ರಜೆಯನ್ನು ಘೋಷಣೆ ಮಾಡಿದೆ. ಸೋಮವಾರ ಎಂದಿನಂತೆಯೇ ಕಾಲೇಜು ಆರಂಭಗೊಳ್ಳಲಿದೆ. ಶಿಕ್ಷಣ ಸಚಿವರು ಶಾಲೆ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಸಮವಸ್ತ್ರ ನಿಯಮ ಪಾಲನೆ ಮಾಡುವಂತೆ ಕಟ್ಟಪ್ಪಣೆಯನ್ನು ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಕೂಡ, ಹಿಜಾಬ್‌ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಜೊತೆಗೆ ಪೊಲೀಸ್‌ ಅಧಿಕಾರಿಗಳು ಕೂಡ ಕಾಲೇಜಿನ ಆವರಣದಲ್ಲಿ ಇತರರಿಗೆ ಕಿರಿಕಿರಿ ಉಂಟು ಮಾಡಿದ್ರೆ ಅಂತಹವರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಇನ್ನು ಕಾಲೇಜಿನ ಗೇಟ್‌ ಹೊರಗಡೆ ಎರಡೂ ಸಮುದಾಯದ ಕೆಲ ಸಂಘಟನೆಯ ಮುಖಂಡರು ನೆರೆದಿದ್ದು, ಪರಿಸ್ಥಿತಿ ಕೈ ಮೀರುವ ಸ್ಥಿತಿಯೂ ನಿರ್ಮಾಣವಾಗಿತ್ತು. ಸದ್ಯ ಕಾಲೇಜಿಗೆ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿದೆ. ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದದ ಹಿಂದೆ ಕೆಲವು ಸಂಘಟನೆಗಳ ಕೈವಾಡವಿದೆ ಅನ್ನೋ ಆರೋಪ ಕೇಳಿಬರುತ್ತಿದೆ. ಸರಕಾರ ಕಠಿಣ ಕ್ರಮವನ್ನು ಕೈಗೊಂಡು ವಿವಾದವನ್ನು ಬಗೆ ಹರಿಸದೇ ಇದ್ರೆ ಸಮಸ್ಯೆ ಇನ್ನಷ್ಟು ಜಟಿಲವಾಗುವ ಸಾಧ್ಯತೆಯಿದೆ.

https://www.youtube.com/watch?v=gYPV14qkkF4

ಇದನ್ನೂ ಓದಿ : ಬೈಂದೂರಲ್ಲಿ ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ 300 ವಿದ್ಯಾರ್ಥಿಗಳು : ಕರಾವಳಿಯಲ್ಲಿ ಮುಂದುವರಿದ ಹಿಜಬ್‌ – ಕೇಸರಿ ಶಾಲು ವಿವಾದ

ಇದನ್ನೂ ಓದಿ : ಪತ್ನಿ ಶಿಲ್ಪಾ ಶೆಟ್ಟಿ ಕುಂದ್ರಾಗೆ 38.5 ಕೋಟಿ ರೂಪಾಯಿ ಆಸ್ತಿ ವರ್ಗಾಯಿಸಿದ ರಾಜ್​ ಕುಂದ್ರಾ

(Hijab Row in Karnataka, College Declared Holiday)

Comments are closed.