Kota Srinivasa Pujari : ಪ್ರವೀಣ್​ ನೆಟ್ಟಾರು ಮನೆ ಕಡೆ ಮುಖ ಮಾಡದ ಕೋಟ ಶ್ರೀನಿವಾಸ ಪೂಜಾರಿ : ತನ್ನದೇ ಸಮುದಾಯದ ಯುವಕನ ಸಾವಿಗೆ ಇದೆಂಥಾ ಬೆಲೆ

ದಕ್ಷಿಣ ಕನ್ನಡ : Minister Kota Srinivasa Pujari : ಹಿಂದೂ ಧರ್ಮದ ಹೆಸರಿನಲ್ಲಿ ಹೋರಾಡಲು ಹೋಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಾದರೂ ರಾಜ್ಯ ಹಾಗೂ ಕೇಂದ್ರದಲ್ಲಿರುವ ಡಬಲ್​ ಎಂಜಿನ್​ ಬಿಜೆಪಿ ಸರ್ಕಾರ ಮಾತ್ರ ಇದಕ್ಕೊಂದು ಪರಿಹಾರವನ್ನು ನೀಡುತ್ತಿಲ್ಲ. ಕೊಲೆ ಪ್ರಕರಣಗಳು ನಡೆದಾಗ ಕಠಿಣ ಕ್ರಮ ಕೈಗೊಳ್ತೇವೆ, ಆರೋಪಿಗಳನ್ನು ಕೂಡಲೇ ಹೆಡೆಮುರಿ ಕಟ್ಟುತ್ತೇವೆಂಬ ರೋಷಾವೇಶದ ಮಾತುಗಳು ಬಿಟ್ಟರೆ ಇನ್ಯಾವ ಕೆಲಸವೂ ಈ ಜನಪ್ರತಿನಿಧಿಗಳಿಂದ ಆಗುವುದಿಲ್ಲ ಎಂಬ ಕಟು ಸತ್ಯ ಇದೀಗ ಜನತೆಗೂ ಅರಿವಾಗಿದೆ.

ಒಂದು ಅಂಕಿ ಅಂಶದ ಪ್ರಕಾರ ಕೋಮು ಘರ್ಷಣೆಯಲ್ಲಿ ಕರಾವಳಿ ಭಾಗದಲ್ಲಿ ಜೀವ ತೆತ್ತ ಹಿಂದೂ ಯುವಕರೆಲ್ಲರೂ ಬಿಲ್ಲವ ಸಮುದಾಯಕ್ಕೆ ಸೇರಿದವರೇ. ಧರ್ಮದ ಕಿಚ್ಚು ಹೊತ್ತಿಸುವವರು ಮನೆಯಲ್ಲಿ ಬೆಚ್ಚಗೆ ಕುಳಿತರೆ ಇಂತಹ ನಾಯಕರನ್ನು ನಂಬಿ ಬೀದಿಗಿಳಿಯುವ ಯುವಕರು ಇಂದು ನೆತ್ತರ ಕೋಡಿ ಹರಿಸುತ್ತಿದ್ದಾರೆ. ಈ ಮಾತಿಗೆ ಮಂಗಳವಾರವಷ್ಟೇ ಬೀದಿ ಹೆಣವಾದ ಪ್ರವೀಣ್​ ನೆಟ್ಟಾರು ಕೂಡ ಹೊರತಾಗಿಲ್ಲ. ಯಾರದ್ದೋ ದ್ವೇಷದ ಸಿಟ್ಟಿಗೆ ಇಂದು ಕೊಲೆಯಾದ ಪ್ರವೀಣ್​ ನೆಟ್ಟಾರು ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಹಿಂದೂ ಕಾರ್ಯಕರ್ತರ ರೋಷಾಗ್ನಿ ಕೊತ ಕೊತನೇ ಕುದಿಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಪೊಲೀಸರ ಲಾಠಿ ಚಾರ್ಜ್​ಗೂ ಜಗ್ಗದೇ ಹಿಂದೂ ಕಾರ್ಯಕರ್ತರು ಬಿಜೆಪಿ ನಾಯಕರಿಗೆ ಹಾಕಿದ ದಿಗ್ಬಂಧನಗಳೇ ಸಾಕ್ಷಿ.

ಬಿಜೆಪಿ ಸಚಿವರಾದ ಅಂಗಾರ ಹಾಗೂ ಸುನೀಲ್​ ಕುಮಾರ್​ ನಿನ್ನೆ ಹಿಂದೂ ಕಾರ್ಯಕರ್ತರ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಲೆ ತಗ್ಗಿಸಿ ನಿಂತಿದ್ದರೆ, ಕೋಮು ಗಲಭೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ತೇವೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಅಕ್ಷರಶಃ ಥಂಡಾ ಹೊಡೆದಿದ್ದಾರೆ. ನಿನ್ನೆ ನಳೀನ್​ ಕುಮಾರ್​ ಕಟೀಲ್​ ಕಾರು ಕೇಸರಿ ಯುವಕರ ಆಕ್ರೋಶಕ್ಕೆ ಇನ್ನೇನು ಪಲ್ಟಿಯಾಗುವುದೊಂದು ಬಾಕಿ ಎನ್ನುವಾಗ ಕೂದಲೆಳೆ ಅಂತರದಿಂದ ಕಟೀಲ್​​ ಕಾರಿನಿಂದ ಬಚಾವಾಗಿ ಹೊರ ಬಂದಿದ್ದಾರೆ.

ಧರ್ಮಕ್ಕಾಗಿ ಹೋರಾಟ ಮಾಡುವುದು ಸರಿ. ಆದರೆ ಧರ್ಮಕ್ಕಾಗಿ ಹೋರಾಟ ಮಾಡುವವರನ್ನು ರಕ್ಷಿಸುವವರು ಯಾರು..? ಎಂಬ ಪ್ರಶ್ನೆ ಬಂದಾಗ ಇಂದು ಬಿಜೆಪಿ ಸರ್ಕಾರ ಕೂಡ ತಲೆ ತಗ್ಗಿಸುವಂತಾಗಿದೆ. ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಸಮುದಾಯಕ್ಕೆ ಸೇರಿದ ಬಿಲ್ಲವ ಸಮುದಾಯದ ಹುಡುಗ ಪ್ರವೀಣ್​ ನೆಟ್ಟಾರು ಬಾರದ ಲೋಕಕ್ಕೆ ತೆರಳಿದ್ದಾನೆ. ಆದರೆ ಸೌಜನ್ಯಕ್ಕೂ ಎಂಬಂತೆ ಕೋಟ ಶ್ರೀನಿವಾಸ ಪೂಜಾರಿ ಪ್ರವೀಣ್​ ನೆಟ್ಟಾರು ಮನೆಯತ್ತ ಮುಖ ಮಾಡಿಲ್ಲ, ಧರ್ಮಕ್ಕಾಗಿ ಪ್ರಾಣ ತೆತ್ತ ತನ್ನದೇ ಸಮುದಾಯದ ಯುವಕನ ತಂದೆ – ತಾಯಿಗೆ, ಪತ್ನಿಗೆ ಒಂದು ಸಾಂತ್ವನದ ಮಾತುಗಳನ್ನು ಹೇಳೋಣ ಎಂಬ ಸೌಜನ್ಯ ಕೂಡ ಕೋಟ ಶ್ರೀನಿವಾಸ ಪೂಜಾರಿಗೆ ಇರದೇ ಹೋಯ್ತಾ ಎಂಬ ಪ್ರಶ್ನೆ ಎದುರಾಗಿದೆ.

ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಕಾದಾಟದಲ್ಲಿ ಇಂದು ಹಿಂದೂ ಯುವಕರು ಬಲಿಯಾಗುತ್ತಿದ್ದಾರೆ. ರಾಜಕೀಯ ನಾಯಕರ ಪೌರುಷದ ಮಾತುಗಳನ್ನು ನಂಬಿ ಕೇಸರಿ ಕಾರ್ಯಕರ್ತರು ಅನ್ಯ ಧರ್ಮೀಯರ ವಿರೋಧ ಕಟ್ಟಿಕೊಂಡು ಸಾವಿನ ದವಡೆಯಲ್ಲಿ ನೇತಾಡುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಆಡಳಿತ ಪಕ್ಷಗಳು ಇಂತಹ ಧೈರ್ಯವನ್ನು ತೋರುವ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡದ ಹೊರತು ಹಿಂದೂ ಯುವಕರ ಸಾವು ತಪ್ಪಿದ್ದಲ್ಲ ಎಂಬುದು ಅಕ್ಷರಶಃ ಸತ್ಯವಾಗಿದೆ. ಇನ್ನಾದರೂ ರಾಜಕೀಯ ಪಕ್ಷಗಳು ಎಚ್ಚೆತ್ತು ಸಮಾಜದ ಯುವಕರನ್ನು ರಕ್ಷಿಸಲಿ ಎಂಬುದೇ ನಮ್ಮ ಆಶಯ.

https://www.youtube.com/watch?v=R8og_fqKZ6U

ಇದನ್ನೂ ಓದಿ : BIG BREAKING : ಪ್ರವೀಣ್‌ ಹತ್ಯೆ ಪ್ರಕರಣ : ಮೊಹಮ್ಮದ್‌ ಶಫೀಕ್‌, ಜಾಕೀರ್‌ ಬಂಧನ

ಇದನ್ನು ಓದಿ : Bommai press conference : ಆತ್ಮಸಾಕ್ಷಿಗೆ ಅನುಗುಣವಾಗಿ ಜನೋತ್ಸವ ರದ್ದು; ಪ್ರವೀಣ್​ ಹಂತಕರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ – ಸಿಎಂ ಬೊಮ್ಮಾಯಿ ಅಭಯ

Outrage against Minister Kota Srinivasa Pujari who did not come to Praveen Nettaru’s house

Comments are closed.