Pramod Muthalik barred : ಶಾಂತಿ ಕದಡುವ ಆತಂಕ : ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ

ಮಂಗಳೂರು : Pramod Muthalik barred : ಹಿಂದೂ ಮುಖಂಡ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕರಾವಳಿ ಜಿಲ್ಲೆಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಬಜರಂಗದಳ ನಾಯಕನ ಕೊಲೆಯು ಹಿಂದೂ ಕಾರ್ಯಕರ್ತರ ರೋಷವನ್ನು ಕುದಿಸುತ್ತಿದೆ . ಹೀಗಾಗಿ ಪ್ರತಿಕಾರದ ಕಿಚ್ಚು ಕರಾವಳಿ ನಾಡನ್ನು ಇನ್ನಷ್ಟು ಬೇಯಿಸುವುದು ಬೇಡ ಎಂಬ ನಿಟ್ಟಿನಲ್ಲಿ ಪೊಲೀಸ್​ ಎಲ್ಲಾ ಕಡೆಗಳಲ್ಲಿ ಹದ್ದಿನ ಕಣ್ಣಿಟ್ಟಿದೆ. ಆರ್​ಎಸ್​ಎಸ್​ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಜಿಲ್ಲೆಗೆ ಬಂದು ಪ್ರಚೋದನಕಾರಿ ಭಾಷಣವನ್ನು ಮಾಡಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ಗೆ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳಿಗೆ ಪ್ರಮೋದ್​ ಮುತಾಲಿಕ್​ ಪ್ರವೇಶವನ್ನು ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಆದೇಶವನ್ನು ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂದಿನಿಂದ ಮುಂದಿನ ಆದೇಶದವರೆಗೂ ಪ್ರಮೋದ್​ ಮುತಾಲಿಕ್​​ಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧ ಇರಲಿದೆ ಎಂದು ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕಮಿಷನರೇಟ್​ ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಪ್ರಮೋದ್​ ಮುತಾಲಿಕ್​ ಭೇಟಿ ನೀಡಬಹುದಾಗಿದೆ. ಇದನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಪ್ರಮೋದ್​ ಮುತಾಲಿಕ್​ ಪ್ರವೇಶಿಸುವಂತಿಲ್ಲ. ಪ್ರಮೋದ್​ ಮುತಾಲಿಕ್​ ಈ ಹಿಂದೆ ಅನೇಕ ಭಾರಿ ಕೋಮು ಭಾವನೆಗಳನ್ನು ಕೆರಳಿಸುವ ಭಾಷಣಗಳನ್ನು ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಹದಗೆಟ್ಟ ಅನೇಕ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಕೋಮು ಸೌಹಾರ್ದತೆ ಹದಗೆಟ್ಟು ಕಾನೂನು ಸುವ್ಯವಸ್ಥೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಈ ಆದೇಶ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಇದನ್ನು ಓದಿ : CM Basavaraja Bommai : ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಗುಡುಗಿದ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ : Bommai high level meeting : ಸಿಎಂ ನೇತೃತ್ವದಲ್ಲಿ ಪೊಲೀಸ್​ ಹಿರಿಯ ಅಧಿಕಾರಿಗಳ ಸಭೆ : ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಕಟ್ಟು ನಿಟ್ಟಿನ ಕ್ರಮ ಸಾಧ್ಯತೆ

Pramod Muthalik barred from entering Dakshina Kannada district

Comments are closed.