ಉಡುಪಿಯಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪರ್ಸ್ ಕಳವು : ಮೂವರು ಮಹಿಳೆಯರನ್ನು ಬಂಧಿಸಿದ ಪೊಲೀಸರು

ಉಡುಪಿ : ಪ್ರಯಾಣಿಕರ ಸೋಗನಲ್ಲಿ ಬಸ್ಸಿನಲ್ಲಿ ಸಂಚರಿಸಿ ಪ್ರಯಾಣಿಕ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಗ್ಯಾಂಗ್ ನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳ್ಳಾರಿಯ ಲತಾ, ಕವಿತಾ ಹಾಗೂ ಸಬಿತಾ ಎಂಬವರೇ ಬಂಧಿತ ಆರೋಪಿಗಳು.

ಬೆಂಗಳೂರಿನ ಉತ್ತರಹಳ್ಳಿಯ ನಿವಾಸಿಯಾಗಿರುವ ಅರ್ಚನಾ ರಾವ್ ಅವರು ಉಡುಪಿಗೆ ಆಗಮಿಸಿದ್ದರು. ಸಿಟಿ ಬಸ್ಸಿನ ಮೂಲಕ ಕುಂಜಿಬೆಟ್ಟಿಗೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಸ್ಸನ್ನೇರಿದ ಮಹಿಳೆಯರು ತಮ್ಮ ಕೈಯಲ್ಲಿದ್ದ ಮಗುವನ್ನು ಅರ್ಚನಾ ರಾವ್ ಅವರ ತೊಡೆಯ ಮೇಲೆ ಕೂರಿಸಿದ್ರು. ಈ ವೇಳೆಯಲ್ಲಿ ಅವರ ಬ್ಯಾಗಿನಲ್ಲಿ ಪರ್ಸ್ ಕಳವು ಮಾಡಿದ್ದರು. ನಂತರ ಎಟಿಎಂನಿಂದ 25,000 ರೂಪಾಯಿ ಹಣವನ್ನು ಡ್ರಾ ಮಾಡಿದ್ದರು. ಈ ಕುರಿತು ಅರ್ಚನಾ ರಾವ್ ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರು ದಾಖಲಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಉಡುಪಿ ನಗರ ಠಾಣೆಯ ಪೊಲೀಸರು, ಉಡುಪಿ ಸುತ್ತಮುತ್ತಲಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದರು. ಅದರಂತೆ ಉಡುಪಿ ನಗರ, ಸಂಚಾರ ಠಾಣೆ, ಮಣಿಪಾಲ, ಕಾಪು, ಪಡುಬಿದ್ರಿ ಪೊಲೀಸರು ಆರೋಪಿಗಳ ಚಲನವನಗಳ ಬಗ್ಗೆ ನಿಗಾ ಇರಿಸಿದ್ದರು.

ಬಸ್ ಹಾಗೂ ರಿಕ್ಷಾ ಚಾಲಕರ ಸಹಕಾರದೊಂದಿಗೆ ಮಾಹಿತಿ ಸಂಗ್ರಹಿಸಿ, ಧಾರವಾಡಕ್ಕೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ ಆರೋಪಿ ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರರಿಂದ 32,400 ರೂ. ನಗದು, ಎರಡು ಮೊಬೈಲ್, ಎರಡು ಎಟಿಎಂ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳ್ಳರ ಗ್ಯಾಂಗ್ ಬಂಧನವಾಗುತ್ತಿದ್ದಂತೆಯೇ ಉಡುಪಿಯ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಹಿಳೆಯರು ಬೇರೆ ಕಡೆಗಳಲ್ಲಿ ಕಳವು ಮಾಡಿದ್ದಾರಾ ? ಈ ಗ್ಯಾಂಗ್ ನಲ್ಲಿ ಎಷ್ಟು ಮಂದಿ ಇದ್ದಾರೆ ಅನ್ನೋ ಕುರಿತು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Comments are closed.