ಆರೋಗ್ಯ ಸಮೀಕ್ಷೆ ನಡೆಸಿದ್ದ ಶಿಕ್ಷಕನಿಗೆ ಇದೀಗ ಕೊರೊನಾ ಸೋಂಕು : ಶಿಕ್ಷಕರಿಗೆ ಶುರುವಾಯ್ತು ಆತಂಕ !

0

ಪುತ್ತೂರು : ಕೊರೊನಾ ವೈರಸ್ ಸೋಂಕು ಹರಡುತ್ತಿದ್ದಂತೆಯೇ ರಾಜ್ಯ ಸರಕಾರ ಕೋವಿಡ್-19 ಆರೋಗ್ಯ ಸಮೀಕ್ಷೆ (ಹೆಲ್ತ್ ವಾಚ್ ) ನಡೆಸಲು ಮುಂದಾಗಿತ್ತು. ಈ ಕಾರ್ಯಕ್ಕೆ ಶಿಕ್ಷಕರನ್ನೂ ನಿಯೋಜನೆ ಮಾಡಲಾಗಿತ್ತು. ಇದೀಗ ಸಮೀಕ್ಷೆ ನಡೆಸಿದ್ದ ಶಿಕ್ಷಕರೋರ್ವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಆತಂಕ ಮೂಡಿಸಿದೆ.

ಕರಾವಳಿ ಭಾಗದಲ್ಲೀಗ ಕೊರೊನಾ ವೈರಸ್ ಸೋಂಕಿನ ಅಬ್ಬರ ಜೋರಾಗಿದೆ. ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿಯಂಚಿನಲ್ಲಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿಶತಕ ಬಾರಿದೆ. ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುತ್ತೆ ಅನ್ನೋ ಆತಂಕ ಕರಾವಳಿಗರನ್ನು ಕಾಡುತ್ತಿದೆ. ಈ ನಡುವಲ್ಲೇ ಆರೋಗ್ಯ ಸಮೀಕ್ಷೆ ನಡೆಸಿದ್ದ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿರುವುದು ಜನರ ನಿದ್ದೆಗೆಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಿಕ್ಷಕರೋರ್ವರು ಕಡಬದ ಕುಂತೂರು ಪ್ರದೇಶದಲ್ಲಿ ಮೇ ತಿಂಗಳಿನಿಂದ ಸರಕಾರದ ನಿರ್ದೇಶನದನ್ವಯ ಆರೋಗ್ಯ ಸಮೀಕ್ಷೆಯನ್ನು ನಡೆಸಿದ್ದರು.

ಆದ್ರೆ ಕಳೆದೊಂದು ವಾರದ ಹಿಂದೆ ಶಿಕ್ಷಕರಿಗೆ ಕಿಡ್ನಿ ಸಮಸ್ಯೆ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಯಲ್ಲಿ ವೈದ್ಯರು ಶಿಕ್ಷಕರನ್ನು ಕೊರೊನಾ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಕೂಡಲೇ ಶಿಕ್ಷಕರನ್ನು ಕೊರೊನಾ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಆದರೆ ಶಿಕ್ಷಕರಿಗೆ ಕೊರೊನಾ ಎಲ್ಲಿಂದ ಹರಡಿದೆ ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ. ಮಾತ್ರವಲ್ಲ ಶಿಕ್ಷಕರ ಮನೆಯನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದ್ದು, ಶಿಕ್ಷಕರ ಜೊತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ರಾಜ್ಯದಾದ್ಯಂತ ಶಿಕ್ಷಕರು ಹೆಲ್ತ್ ವಾಚ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇದೀಗ ಶಾಲೆಗಳು ಪುನರಾರಂಭಗೊಂಡಿವೆ. ಶಿಕ್ಷಕರನ್ನು ಇಲಾಖೆ ಕಡ್ಡಾಯವಾಗಿ ಶಾಲೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಶಿಕ್ಷಕರು ಸೋಮವಾರದಿಂದಲೇ ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಶಿಕ್ಷಕರು ಕೊರೊನಾ ಸೋಂಕು ಪೀಡಿತ ಪ್ರದೇಶಗಳಲ್ಲಿಯೇ ಕಾರ್ಯನಿರ್ವಹಿಸಿರುವುದರಿಂದಾಗಿ ಸೋಂಕು ಹರಡುವ ಆತಂಕ ಶಿಕ್ಷಕರನ್ನು ಕಾಡುತ್ತಿದೆ. ಅದ್ರಲ್ಲೂ ಶಾಲೆಗೆ ತೆರಳಿ ಪೋಷಕರ ಸಭೆಗಳನ್ನು ನಡೆಸುವುದು ಕೂಡ ಅನಾಹುತಕ್ಕೆ ಎಡೆಮಾಡಿಕೊಡುತ್ತಿದೆ.

20 ದಿನಗಳಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯೂ ಆರಂಭಗೊಳ್ಳುತ್ತಿದ್ದು, ಇದೀಗ ಶಿಕ್ಷಕರು ಶಾಲೆಗಳಿಗೆ ತೆರಳುವುದರಿಂದ ಯಾರಾದ್ರೂ ಶಿಕ್ಷಕರಲ್ಲಿ ಸೋಂಕು ಪತ್ತೆಯಾದ್ರೆ ಇಡೀ ಶಿಕ್ಷಕ ಸಮೂಹಕ್ಕೆ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೆಲ್ತ್ ವಾಚ್ ಸಮೀಕ್ಷೆ ನಡೆಸಿರುವ ಶಿಕ್ಷಕರಿಗೆ ಪಿಪಿಇ ಕಿಟ್ ನೀಡಿರಲಿಲ್ಲ. ಅಲ್ಲದೇ ಯಾವುದೇ ಸುರಕ್ಷತಾ ಕ್ರಮಗಳನ್ನೂ ಕೈಗೊಂಡಿರಲಿಲ್ಲ.

ಅಷ್ಟೇ ಯಾಕೆ ಅವರನ್ನು ಇದುವರೆಗೂ ಕೊರೊನಾ ತಪಾಸಣೆಯನ್ನು ನಡೆಸಿಲ್ಲ. ಈಗಾಗಲೇ ಚೆಕ್ ಪೋಸ್ಟ್ ಡ್ಯೂಟಿ ಮಾಡಿದ್ದ ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ಬಹುತೇಕರಿಗೆ ಯಾವುದೇ ಲಕ್ಷಣಗಳಿಲ್ಲದೇ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ ಶಿಕ್ಷಕರನ್ನು ತಪಾಸಣೆಗೆ ಒಳಪಡಿಸಿದ್ರೆ ಸೋಂಕು ಪತ್ತೆಯಾಗುವ ಸಾಧ್ಯತೆಯಿದೆ. ಎಸ್ಎಸ್ಎಲ್ ಸಿ ಪರೀಕ್ಷೆಯ ಸಮಯದಲ್ಲಿ ಶಿಕ್ಷಕರಿಗೆ ಸೋಂಕು ಕಂಡುಬಂದಿದ್ರೆ ಏನು ಮಾಡಬೇಕು ಅನ್ನೋ ಚಿಂತೆ ಶಿಕ್ಷಕರನ್ನು ಕಾಡುತ್ತಿದೆ.

ಈ ನಿಟ್ಟಿನಲ್ಲಿ ಹೆಲ್ತ್ ವಾಚ್, ಚೆಕ್ ಪೋಸ್ಟ್, ಆಸ್ಪತ್ರೆ ಸೇರಿದಂತೆ ಕೋವಿಡ್ -19 ಸೋಂಕಿನ ವಿರುದ್ದದ ಹೋರಾಟದಲ್ಲಿ ತೊಡಗಿಕೊಂಡವರ ಆರೋಗ್ಯ ತಪಾಸಣೆಯನ್ನು ನಡೆಸಿ ನಂತರವೇ ಶಾಲೆಗಳನ್ನು ಪುನರಾರಂಭ ಮಾಡುವುದು ಒಳಿತು. ಇಲ್ಲಾ ಎಸ್ಎಸ್ಎಲ್ ಸಿ ಪರೀಕ್ಷೆಯ ವರೆಗಾದ್ರೂ ಶಿಕ್ಷಕರನ್ನು ಶಾಲೆಗೆ ಕರೆಯಿಸದೇ ಇರುವುದೇ ಸೂಕ್ತ ಅನ್ನೋ ಮಾತುಗಳು ಕೇಳಿಬರುತ್ತಿದೆ. ನೂರಾರು ಸಂಖ್ಯೆಯಲ್ಲಿ ಮಕ್ಕಳ ಪೋಷಕರು ಶಾಲಾ ದಾಖಲಾತಿ, ಶಾಲಾರಂಭದ ಕುರಿತ ಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಶಿಕ್ಷಕರಿಗೆ ಸೋಂಕಿದ್ರೆ ಪೋಷಕರಿಗೂ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೇ ಪೋಷಕರಿಂದಲೂ ಶಿಕ್ಷಕರಿಗೆ ಸೋಂಕು ಹರಡುವ ಆತಂಕವೂ ಇದೆ. ಕೇವಲ ಹಠಕ್ಕೆ ಬಿದ್ದವಂತೆ ಶಿಕ್ಷಣ ಸಚಿವರ ಸುರೇಶ್ ಕುಮಾರ್ ಹಾಗೂ ರಾಜ್ಯ ಸರಕಾರ ತರಾತುರಿಯಲ್ಲಿ ಶಾಲೆ ಪುನರಾರಂಭ, ಶಿಕ್ಷಕರನ್ನು ಶಾಲೆಗೆ ಕರೆಯಿಸುವುದನ್ನು ಬಿಟ್ಟು, ಶಿಕ್ಷಕರಿಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲೇ ಬೇಕಾದ ಅನಿವಾರ್ಯತೆಯಿದೆ.

Leave A Reply

Your email address will not be published.