ಸನ್​ರೈಸರ್ಸ್ ವಿರುದ್ಧ ಆರ್​ಸಿಬಿ ಪರಾಭವ.. ಸೋಲಿನ ನಡುವೆಯೂ ಆರ್​ಸಿಬಿಗೆ ಅಗ್ರಸ್ಥಾನ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ತಂಡ 55 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಐಪಿಎಲ್ 2026ರ 67ನೇ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ 55 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಪಾಯಿಂಟ್ ಪಟ್ಟಿಯ ಮೊದಲ ಎರಡು ಸ್ಥಾನಗಳಿಗಾಗಿ ನಡೆದ ಈ ಮಹಾ ಸಮರದಲ್ಲಿ, ಬೃಹತ್ ಮೊತ್ತ ಕಲೆಹಾಕಿದರೂ ಸನ್ರೈಸರ್ಸ್ ತಂಡಕ್ಕೆ ಅಗ್ರ 2ರ ಸ್ಥಾನಕ್ಕೇರಲು ಸಾಧ್ಯವಾಗಲಿಲ್ಲ. ಇತ್ತ ಕೊನೆಯ ಲೀಗ್ ಪಂದ್ಯದಲ್ಲಿ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ನೆಟ್‌ ರನ್ ರೇಟ್ ಬಲದಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಎಸ್‌ಆರ್‌ಎಚ್ ತಂಡಕ್ಕೆ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಕೇವಲ 4 ಓವರ್‌ಗಳಲ್ಲಿ 45 ರನ್ ಚಚ್ಚಿ ಉತ್ತಮ ಅಡಿಪಾಯ ಹಾಕಿಕೊಟ್ಟರು.ಮೂರು ಜೀವದಾನಗಳ ಪೂರ್ಣ ಲಾಭ ಪಡೆದ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಒಟ್ಟು 56 ರನ್ ಗಳಿಸಿ ಪೆವಿಲಿಯನ್ ಸೇರಿದರು.ನಂತರ ಜೊತೆಯಾದ ಇಶಾನ್ ಕಿಶಾನ್ (79 ರನ್) ಮತ್ತು ಹೆನ್ರಿಕ್ ಕ್ಲಾಸೆನ್ (24 ಎಸೆತಗಳಲ್ಲಿ 51 ರನ್) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.ಅಂತಿಮವಾಗಿ ನಿತೀಶ್ ರೆಡ್ಡಿ ಅವರ ಅಜೇಯ 29 ರನ್‌ಗಳ ನೆರವಿನಿಂದ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 256 ರನ್‌ಗಳ ಹಿಮಾಲಯದಂತಹ ಗುರಿ ನೀಡಿತು.

ಇದನ್ನೂ ಓದಿ : ರಾಜ್ಯದಲ್ಲಿ ಮುಂಗಾರು ಪೂರ್ವ ಅಬ್ಬರ..! ಮುಂದಿನ 1 ವಾರ ಭಾರೀ ಮಳೆ ಮುನ್ಸೂಚನೆ!

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ 44 ರನ್​ ಸಿಡಿಸಿ ವೇಗದ ಆರಂಭ ನೀಡಿದರಾದರೂ, ಎಹ್ಸಾನ್ ಮಾಲಿಂಗ ಈ ಜೋಡಿಯನ್ನು ಬೇರ್ಪಡಿಸಿದರು. ಬೆನ್ನಲ್ಲೇ ಶಕೀಬ್ ಹುಸೇನ್ ಅವರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಕೇವಲ 15 ರನ್‌ಗಳಿಗೆ ಔಟ್ ಮಾಡುವ ಮೂಲಕ ಬೆಂಗಳೂರಿಗೆ ದೊಡ್ಡ ಆಘಾತ ನೀಡಿದರು.

ದೇವದತ್ ಪಡಿಕ್ಕಲ್ ಕೇವಲ 21 ರನ್​ ಬೇಗನೇ ಔಟಾದರೆ, ನಾಯಕನ ಜವಾಬ್ದಾರಿ ಹೊತ್ತ ರಜತ್ ಪಾಟಿದಾರ್ ಅರ್ಧಶತಕ ಗಳಿಸಿದರೂ ಅವರ ಇನಿಂಗ್ಸ್ ಆಮೆಗತಿಯಲ್ಲಿತ್ತು. ಕೃನಾಲ್ ಪಾಂಡ್ಯ ಅಜೇಯ 41 ಮತ್ತು ಟಿಮ್ ಡೇವಿಡ್ 15 ರನ್ ಗಳಿಸಿದರೂ, ಆರ್‌ಸಿಬಿ 20 ಓವರ್‌ಗಳಲ್ಲಿ ಕೇವಲ 200 ರನ್ ಗಳಿಸಲಷ್ಟೇ ಶಕ್ತವಾಗಿ 55 ರನ್‌ಗಳಿಂದ ಸೋಲೊಪ್ಪಿಕೊಂಡಿತು.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories