ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಗೆ ಲಂಕಾ ಉಡೀಸ್: ಕೇವಲ 6 ರನ್‌ನಿಂದ ಕೈತಪ್ಪಿದ ವಿಶ್ವ ದಾಖಲೆಯ ಶತಕ!

ಶ್ರೀಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಯುವ ಆಟಗಾರ, ಕೇವಲ 6 ರನ್‌ಗಳ ಅಂತರದಿಂದ ವಿಶ್ವ ದಾಖಲೆಯ ಶತಕವೊಂದನ್ನು ಕೈಚೆಲ್ಲಿದ್ದಾರೆ.

ಟಿ20 ಮತ್ತು ಐಪಿಎಲ್‌ನಲ್ಲಿ ಧೂಳೆಬ್ಬಿಸಿದ್ದ 15 ವರ್ಷದ ರನ್ ಮಷಿನ್ ವೈಭವ್ ಸೂರ್ಯವಂಶಿ, ಇದೀಗ ಏಕದಿನ (ಲಿಸ್ಟ್ ಎ) ಕ್ರಿಕೆಟ್‌ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಶ್ರೀಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಯುವ ಆಟಗಾರ, ಕೇವಲ 6 ರನ್‌ಗಳ ಅಂತರದಿಂದ ವಿಶ್ವ ದಾಖಲೆಯ ಶತಕವೊಂದನ್ನು ಕೈಚೆಲ್ಲಿದ್ದಾರೆ.

ದಂಬುಲ್ಲಾದಲ್ಲಿ ನಡೆಯುತ್ತಿರುವ ಶ್ರೀಲಂಕಾ ‘ಎ’ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್, ಮೊದಲ ಓವರ್‌ನಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು.  ಮೈದಾನದ ಮೂಲೆ ಮೂಲೆಗೂ ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದ ವೈಭವ್, ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

ಈ ಮೂಲಕ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು. 2005ರಲ್ಲಿ ಶ್ರೀಲಂಕಾದ ಕೌಶಲ್ಯ ವೀರರತ್ನೆ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

29ನೇ ಎಸೆತದಲ್ಲಿ ಉಲ್ಟಾ ಆಯ್ತು ಅದೃಷ್ಟ: ಕೈತಪ್ಪಿದ ವಿಶ್ವ ದಾಖಲೆ

ಅರ್ಧಶತಕದ ಬಳಿಕವೂ ಅಬ್ಬರ ಮುಂದುವರಿಸಿದ ವೈಭವ್, ಕೇವಲ 28 ಎಸೆತಗಳಲ್ಲಿ 94 ರನ್ ಚಚ್ಚಿದ್ದರು. ಇನ್ನೊಂದು ಎಸೆತದಲ್ಲಿ ಸಿಕ್ಸ್ ಬಾರಿಸಿದ್ದರೆ, ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ವಿಶ್ವ ದಾಖಲೆ ಅವರ ಪಾಲಾಗುತ್ತಿತ್ತು. ಆದರೆ, 29ನೇ ಎಸೆತದಲ್ಲಿ ದೊಡ್ಡ ಶಾಟ್‌ಗೆ ಯತ್ನಿಸಿ ಮಿಡ್ ಆನ್‌ನಲ್ಲಿದ್ದ ಫೀಲ್ಡರ್‌ಗೆ ಕ್ಯಾಚ್ ನೀಡಿದರು.

ಅಂತಿಮವಾಗಿ ವೈಭವ್ ಸೂರ್ಯವಂಶಿ 29 ಎಸೆತಗಳಲ್ಲಿ 10 ಫೋರ್ ಹಾಗೂ 8 ಸಿಕ್ಸರ್ ಒಳಗೊಂಡ 94 ರನ್ ಸಿಡಿಸಿ ಔಟಾದರು. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕದ ದಾಖಲೆ ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮೆಕ್​ಗುರ್ಕ್ (2023ರಲ್ಲಿ 29 ಎಸೆತಗಳಲ್ಲಿ ಶತಕ) ಹೆಸರಿನಲ್ಲೇ ಉಳಿದುಕೊಂಡಿತು. ಇದನ್ನು ಸರಿಗಟ್ಟುವ ಸುವರ್ಣ ಅವಕಾಶ ವೈಭವ್‌ಗೆ ಇತ್ತಾದರೂ, ಕೇವಲ 6 ರನ್‌ಗಳಿಂದ ಅದು ಮಿಸ್ ಆಯಿತು.

ವೈಭವ್ ನೀಡಿದ ಈ ಸ್ಫೋಟಕ ಆರಂಭ ಪಡೆದ ಟೀಮ್ ಇಂಡಿಯಾ ವೈಭವ್ ಸೂರ್ಯವಂಶಿ ಔಟ್ ಆಗುವಾಗ 12 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 144 ರನ್ ಕಲೆಹಾಕಿದೆ.Vaibhav Sooryavanshi

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.

Related Stories