ನಿರ್ಭಯಾ ಕೇಸ್: ತಿಹಾರ್ ಜೈಲಿನಲ್ಲಿ ನಾಲ್ವರು ದೋಷಿಗಳ ಗಲ್ಲಿಗೇರಿಸುವ ಅಣಕು ತಾಲೀಮು !

0

ನವದೆಹಲಿ : ದಿಲ್ಲಿಯ ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ನೇಣಿಗೇರಿಸಲಿದ್ದು, ಈ ಹಿನ್ನಲೆಯಲ್ಲಿ ಭಾನುವಾರ ತಿಹಾರ್ ಜೈಲಿನಲ್ಲಿ ನಾಲ್ವರನ್ನು ಏಕಕಾಲಕ್ಕೆ ನೇಣುಗಂಬಕ್ಕೆ ಏರಿಸುವ ಅಣಕು(ಡಮ್ಮಿ ಎಕ್ಸಿಕ್ಯೂಷನ್) ತಾಲೀಮು ನಡೆಸಿರುವುದಾಗಿ ವರದಿ ತಿಳಿಸಿದೆ.
ನಿರ್ಭಯಾ ಪ್ರಕರಣದ ಅಪರಾಧಿಗಳಾದ ಪವನ್ ಗುಪ್ತಾ, ಅಕ್ಷಯ್, ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ ಸೇರಿದಂತೆ ನಾಲ್ವರನ್ನು ಜವನರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲಿಗೇರಿಸುವಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರಂಟ್ ಹೊರಡಿಸಿದ್ದಾರೆ.
ತಿಹಾರ್ ಜೈಲಿನ ಸೆಲ್ ನಂ.3ರಲ್ಲಿ ಜನವರಿ 22ರಂದು ನೇಣಿಗೆ ಹಾಕಲು ಬಳಸಲಾಗುವ ಹಗ್ಗಗಳನ್ನೇ ಬಳಸಿದ್ದು, ನಾಲ್ವರ ತೂಕದ ಆಧಾರದ ಮೇಲೆ ಕಲ್ಲು ಹಾಗೂ ಮರಳನ್ನು ತುಂಬಿದ್ದ ಗೋಣಿಚೀಲಗಳನ್ನು ನೇಣಿಗೇರಿಸಿ ತಾಲೀಮು ನಡೆಸಿರುವುದಾಗಿ ವರದಿ ವಿವರಿಸಿದೆ. ಏಷ್ಯಾದ ಅತೀ ದೊಡ್ಡ ಜೈಲಾಗಿರುವ ತಿಹಾರ್ ನಲ್ಲಿ ನಾಲ್ವರನ್ನು ನೇಣಿಗೇರಿಸಲು ದಿನಗಣನೆ ಆರಂಭವಾಗಿದೆ.
ಜೈಲಿನ ಸೆಲ್ 3ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ದೋಷಿ ಅಫ್ಜಲ್ ಗುರುವನ್ನು 2013ರಲ್ಲಿ ನೇಣಿಗೇರಿಸಲಾಗಿತ್ತು. ಇದೀಗ ತಿಹಾರ್ ನಲ್ಲಿ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಒಟ್ಟಿಗೇ ನೇಣಿಗೇರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ನಾಲ್ವರನ್ನು ಗಲ್ಲಿಗೇರಿಸುವ ವಧಾಕಾರನನ್ನು ಮೀರತ್ ನಿಂದ ದಿಲ್ಲಿಗೆ ಕಳುಹಿಸಲಾಗಿದೆ ಎಂದು ಉತ್ತರಪ್ರದೇಶದ ಜೈಲು ಅಧಿಕಾರಿಗಳು ಖಚಿತಪಡಿಸಿರುವುದಾಗಿ ವರದಿ ಹೇಳಿದೆ.

Leave A Reply

Your email address will not be published.