ಬೆಂಗಳೂರಿನಲ್ಲಿ ದಂಪತಿಗಳಿಂದ ಡಿಲೆವರಿ ಬಾಯ್ ಕೊಲೆ, ಸಿಟಿಟಿವಿಯಲ್ಲಿ ಕಂಡದ್ದಿಷ್ಟು

ಬೆಂಗಳೂರು: ಬೆಂಗಳೂರು ನಗರದಲ್ಲಿ ನಡೆದ ಭೀಕರ ರಸ್ತೆ ಘಟನೆಯೊಂದರಲ್ಲಿ, ಕೇವಲ ಸಣ್ಣ ಅಪಘಾತದ ವಿಚಾರಕ್ಕೆ 24 ವರ್ಷದ ಡೆಲಿವರಿ ಬಾಯ್ ದರ್ಶನ್ ಅವರನ್ನು ಕಾರಿನಿಂದಲೇ ಬೆನ್ನಟ್ಟಿ, ಉದ್ದೇಶಪೂರ್ವಕವಾಗಿ ಗುದ್ದಿ ಕೊಲೆ ಮಾಡಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ದಕ್ಷಿಣ ಬೆಂಗಳೂರಿನ ನಟರಾಜ ಲೇಔಟ್ನಲ್ಲಿ ಈ ದುರಂತ ಸಂಭವಿಸಿದೆ.
ಕಲರಿಪಯಟ್ಟು ತರಬೇತುದಾರನಾದ ಮನೋಜ್ ಕುಮಾರ್ (32) ಮತ್ತು ಆತನ ಪತ್ನಿ ಆರತಿ ಶರ್ಮಾ (30) ಅವರೇ ಈ ಕೃತ್ಯ ಎಸಗಿದ ಆರೋಪಿಗಳು.
ಘಟನೆ ನಡೆದ ರೀತಿ:
ಘಟನೆಯ ದಿನ, ದರ್ಶನ್ ಅವರು ಆಹಾರ ವಿತರಣೆಗೆ ಹೋಗುತ್ತಿದ್ದಾಗ, ಆಕಸ್ಮಿಕವಾಗಿ ಅವರ ಸ್ಕೂಟರ್ ಆರೋಪಿ ಮನೋಜ್ ಕುಮಾರ್ ಅವರ ಕಾರಿಗೆ ತಾಗಿ, ಹಿಂಬದಿಯ ಕನ್ನಡಿ (ರೀರ್ ವ್ಯೂ ಮಿರರ್)ಗೆ ಸಣ್ಣ ಹಾನಿಯಾಗಿದೆ. ತಕ್ಷಣ ದರ್ಶನ್ ಕ್ಷಮೆಯಾಚಿಸಿ ಮುಂದೆ ಹೋಗಿದ್ದಾರೆ. ಆದರೆ ಇದರಿಂದ ತೀವ್ರ ಕೋಪಗೊಂಡ ಕುಮಾರ್, ತಕ್ಷಣವೇ ಯು-ಟರ್ನ್ ತೆಗೆದುಕೊಂಡು ದರ್ಶನ್ ಅವರ ಸ್ಕೂಟರ್ ಅನ್ನು ಬೆನ್ನಟ್ಟಿ ಹೋಗಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಮನೋಜ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ಕಾರನ್ನು ಎಡಕ್ಕೆ ತಿರುಗಿಸಿ, ಸ್ಕೂಟರ್ಗೆ ಹಿಂದಿನಿಂದಲೇ ಬಲವಾಗಿ ಗುದ್ದಿದ್ದಾರೆ. ಇದರ ಪರಿಣಾಮವಾಗಿ ದರ್ಶನ್ ಮತ್ತು ಅವರ ಹಿಂದಿದ್ದ ಸಹ ಸವಾರ ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ದರ್ಶನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸಾಕ್ಷ್ಯವನ್ನು ಮರೆಮಾಚಲು ಯತ್ನ:
ಆರಂಭದಲ್ಲಿ ಇದನ್ನು ‘ಹಿಟ್ ಅಂಡ್ ರನ್’ ಪ್ರಕರಣ ಎಂದು ದಾಖಲಿಸಲಾಗಿತ್ತು. ಆದರೆ, ತನಿಖಾಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಇದು ಕೇವಲ ಅಪಘಾತವಲ್ಲ, ಬದಲಿಗೆ ಉದ್ದೇಶಪೂರ್ವಕ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಇದಕ್ಕಿಂತ ಭಯಾನಕ ಸಂಗತಿಯೆಂದರೆ, ಘಟನೆ ನಡೆದ ಸುಮಾರು 40 ನಿಮಿಷಗಳ ನಂತರ, ದಂಪತಿಗಳು ಮಾಸ್ಕ್ ಧರಿಸಿ ಮತ್ತೆ ಅದೇ ಸ್ಥಳಕ್ಕೆ ಮರಳಿದ್ದಾರೆ. ಅವರು ತಮ್ಮ ಕಾರಿಗೆ ಹಾನಿಯಾಗಿದ್ದರಿಂದ ಮುರಿದು ಬಿದ್ದಿದ್ದ ಕಾರಿನ ಭಾಗಗಳನ್ನು ರಸ್ತೆಯಿಂದ ಸಂಗ್ರಹಿಸಿಕೊಂಡು ಹೋಗುವ ದೃಶ್ಯವೂ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ದೃಶ್ಯಾವಳಿಯೇ ಪೊಲೀಸರಿಗೆ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ನಿರ್ಣಾಯಕವಾಯಿತು.



