Money Fraud: ಕರ್ನಾಟಕ ಬ್ಯಾಂಕ್ ಸಿಬ್ಬಂದಿಯಿಂದಲೇ ದೋಖಾ ಆರೋಪ; 3 ಕೋಟಿಗೂ ಹೆಚ್ಚು ಗುಳುಂ?


ಸಿದ್ದಾಪುರ: ಕರ್ನಾಟಕ ಬ್ಯಾಂಕ್‌ನ ಉತ್ತರ ಕನ್ನಡದ ಸಿದ್ದಾಪುರ ಶಾಖೆಯಲ್ಲಿ ಗ್ರಾಹಕ ಸೇವಾ ಸಹಾಯಕನಾಗಿದ್ದ ಉದ್ಯೋಗಿಯೊಬ್ಬರು ಸುಮಾರು ₹ 3.51 ಕೋಟಿಗೂ ಅಧಿಕ ಮೊತ್ತದ ಹಣಕಾಸಿನ ವಂಚನೆ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗ್ರಾಹಕರ ಠೇವಣಿಯನ್ನು ದುರುಪಯೋಗಪಡಿಸಿಕೊಂಡು, ನಕಲಿ ದಾಖಲೆಗಳನ್ನು ನೀಡಿ ಈ ಬೃಹತ್ ಮೊತ್ತವನ್ನು ಕಬಳಿಸಲಾಗಿದೆ.

ವಂಚನೆ ಕೃತ್ಯದ ವಿವರ

ಸಿದ್ದಾಪುರ ತಾಲೂಕಿನ ಹೆಗ್ಗರಣಿಯ ನಿವಾಸಿ ಮಂಜುನಾಥ ಶ್ರೀಧರ ಭಟ್ಟ ಅವರು ಆಗಸ್ಟ್ 5, 2013 ರಂದು ಕರ್ನಾಟಕ ಬ್ಯಾಂಕ್ ಸೇರಿದ್ದರು. ಪ್ರೊಬಶನರಿ ಕ್ಲರ್ಕ್‌ನಿಂದ ಪದೋನ್ನತಿ ಪಡೆದು ಚನ್ನಗಿರಿ ಶಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅವರು, ಜನವರಿ 20, 2023 ರಂದು ಸಿದ್ದಾಪುರ ಶಾಖೆಗೆ ವರ್ಗವಾಗಿ ಬಂದಿದ್ದರು. ಹಲಗೇರಿಯ ಅರಮನೆಯಲ್ಲಿ ವಾಸವಾಗಿದ್ದ ಇವರು, ಬ್ಯಾಂಕಿನ ಗ್ರಾಹಕ ಸೇವಾ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.

ಗ್ರಾಹಕರ ಖಾತೆಗಳನ್ನು ನಿರ್ವಹಿಸುವ ಅಧಿಕಾರ ಹೊಂದಿದ್ದ ಮಂಜುನಾಥ ಭಟ್ಟ, ಆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸುಮಾರು ₹ 3,51,84,349 ಹಣವನ್ನು ಲೂಟಿ ಮಾಡಿದ್ದಾರೆ. ಮುಖ್ಯವಾಗಿ ಹಿರಿಯ ನಾಗರಿಕರು ಹಾಗೂ ಅಪರಿಚಿತ ಗ್ರಾಹಕರ ಖಾತೆಗಳಲ್ಲಿದ್ದ ಹಣವನ್ನು ತಮ್ಮ ವೈಯಕ್ತಿಕ ಐಸಿಐಸಿಐ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.

ಠೇವಣಿ ನವೀಕರಣಕ್ಕೆ ಬಂದಾಗ ಬಯಲಾದ ರಹಸ್ಯ

ಈ ಬೃಹತ್ ವಂಚನೆ ಪ್ರಕರಣವು ಸೆಪ್ಟೆಂಬರ್ 29, 2025 ರಂದು ಬೆಳಕಿಗೆ ಬಂದಿದೆ. ಅಂದು ಬ್ಯಾಂಕಿನ ಗ್ರಾಹಕ ಮಹಾಬಲೇಶ್ವರ ಆರ್. ಹೆಗಡೆ ಅವರು ತಮ್ಮ ಠೇವಣಿ ನವೀಕರಣಕ್ಕಾಗಿ ಸಿದ್ದಾಪುರ ಶಾಖೆಗೆ ಬಂದಿದ್ದರು. ಅವರ ₹ 4,40,500 ಮೌಲ್ಯದ ಠೇವಣಿ ವಾಸ್ತವವಾಗಿ ಒಂದು ವರ್ಷದ ಹಿಂದೆಯೇ ಮುಕ್ತಾಯಗೊಂಡಿರುವ ಬಗ್ಗೆ ಬ್ಯಾಂಕಿನ ಕಂಪ್ಯೂಟರ್‌ನಲ್ಲಿ ಮಾಹಿತಿ ಇತ್ತು. ಆದರೆ, ಹೆಗಡೆ ಅವರ ಬಳಿ ಇದ್ದ ಠೇವಣಿ ಪತ್ರ ನಕಲಿ ಎಂದು ಪರಿಶೀಲನೆಯ ವೇಳೆ ತಿಳಿದುಬಂದಿದೆ. ಬ್ಯಾಂಕ್ ಹೆಸರಿನಲ್ಲಿ ನಕಲಿ ರಸೀದಿ ಹಾಗೂ ಪ್ರಮಾಣ ಪತ್ರ ನೀಡಿದವರ ಹುಡುಕಾಟ ನಡೆಸಿದಾಗ ಮಂಜುನಾಥ ಭಟ್ಟರ ಪಾತ್ರ ಬಯಲಾಯಿತು.

ಮೋಸದ ಕಾರ್ಯತಂತ್ರ: ಎಸ್‌ಎಂಎಸ್‌ ಸೇವೆ ಸ್ಥಗಿತ

ಬ್ಯಾಂಕ್ ನಡೆಸಿದ ಆಂತರಿಕ ತನಿಖೆಯಲ್ಲಿ, ಮಂಜುನಾಥ ಭಟ್ಟ ಅವರು ಮಹಾಬಲೇಶ್ವರ ಹೆಗಡೆ ಅವರ ಠೇವಣಿಯನ್ನು ಮುರಿದು, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿರುವುದು ದೃಢಪಟ್ಟಿತು. ಗ್ರಾಹಕರಿಗೆ ಹಣದ ವ್ಯವಹಾರದ ಬಗ್ಗೆ ಮಾಹಿತಿ ತಿಳಿಯದಂತೆ ಮಾಡಲು, ಭಟ್ಟ ಅವರು ಗ್ರಾಹಕರ ಎಸ್‌ಎಂಎಸ್‌ ಅಲರ್ಟ್‌ ಸೇವೆಯನ್ನು ಸ್ಥಗಿತಗೊಳಿಸುತ್ತಿದ್ದರು. ತನಿಖೆ ಮುಂದುವರೆದಂತೆ, ಅನೇಕ ಗ್ರಾಹಕರಿಗೆ ಠೇವಣಿ ಮುಚ್ಚಿ, ಎಸ್‌ಎಂಎಸ್‌ ಸೇವೆ ರದ್ದುಗೊಳಿಸಿ, ನಕಲಿ ಪ್ರಮಾಣ ಪತ್ರ ನೀಡುವ ಮೂಲಕ ವಂಚನೆ ಎಸಗಿರುವುದು ಕಂಡುಬಂದಿದೆ.

ವಂಚನೆಯ ಒಟ್ಟು ಮೊತ್ತ ₹ 3,51,84,349 ಎಂದು ಖಚಿತವಾದ ನಂತರ, ಕರ್ನಾಟಕ ಬ್ಯಾಂಕ್‌ನ ಶಾಖಾ ಪ್ರಬಂಧಕ ಶಂಬುಲಿಂಗ ಭಟ್ಟ ಅವರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಮಂಜುನಾಥ ಭಟ್ಟರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ದೊಡ್ಡ ಮೊತ್ತದ ವಂಚನೆಯಲ್ಲಿ ಮಂಜುನಾಥ ಭಟ್ಟರೊಂದಿಗೆ ಇತರರೂ ಶಾಮೀಲಾಗಿರುವ ಸಾಧ್ಯತೆಯ ಬಗ್ಗೆ ಬ್ಯಾಂಕ್ ಶಂಕೆ ವ್ಯಕ್ತಪಡಿಸಿದೆ.


ಈ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories