Karkala News: ಕಾರ್ಕಳದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅಡ್ಡೆಗೆ ಖಾಕಿ ದಾಳಿ; 3 ಟಿಪ್ಪರ್, ಕಂಪ್ರೆಶರ್ ಜಪ್ತಿ
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ 'ಅರ್ಬಿಪಾದೆ' ಎಂಬಲ್ಲಿ ಸರ್ವೆ ನಂಬರ್ 281ಕ್ಕೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿತ್ತು.
ಕಾರ್ಕಳ: ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ ಮೂರು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ‘ಅರ್ಬಿಪಾದೆ’ ಎಂಬಲ್ಲಿ ಸರ್ವೆ ನಂಬರ್ 281ಕ್ಕೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ (PSI) ಮುರುಳೀಧರ ನಾಯ್ಕ್ ಅವರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದರು.
ಸರಕಾರಿ ಜಾಗದಲ್ಲಿ ಅಧಿಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೆ ಕಲ್ಲು ಬಂಡೆಗಳನ್ನು ಒಡೆದು ಸೈಜ್ ಕಲ್ಲುಗಳನ್ನಾಗಿ ಪರಿವರ್ತಿಸಿ, ಕಳವು ಮಾಡಿ ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಕುಕ್ಕುಂದೂರು ಗ್ರಾಮದ ನಿವಾಸಿಗಳಾದ ಅರುಣ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ ಹಾಗೂ ಸತೀಶ್ ಕಿಣಿ ಮತ್ತು ಇವರ ಜೊತೆಗಿದ್ದ ಇತರ ಸಹಚರರು ಸಂಘಟಿತರಾಗಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ರೂಪಾಯಿ ಮೌಲ್ಯದ ಕಲ್ಲು, ಲಾರಿ ಮತ್ತು ಉಪಕರಣಗಳ ಜಪ್ತಿ
ದಾಳಿಯ ವೇಳೆ ಪೊಲೀಸರು ಅಕ್ರಮ ಕಲ್ಲು ಕಳವು ಮತ್ತು ಸಾಗಾಟಕ್ಕೆ ಬಳಸುತ್ತಿದ್ದ ಬೃಹತ್ ಸೊತ್ತುಗಳನ್ನು ಸ್ಥಳದಲ್ಲೇ ಸ್ವಾಧೀನಪಡಿಸಿಕೊಂಡಿದ್ದಾರೆ. ಕಲ್ಲು ಸಾಗಾಟಕ್ಕೆ ಬಳಸುತ್ತಿದ್ದ KA-20-A-7261, KA-20-B-8099 ಮತ್ತು KA-20-AB-0482 ನಂಬರಿನ ಮೂರು ಪ್ರಮುಖ ಟಿಪ್ಪರ್ ಲಾರಿಗಳು. ಲಾರಿಗಳಲ್ಲಿ ತುಂಬಿಸಲಾಗಿದ್ದ ಅಕ್ರಮವಾಗಿ ಕಳವು ಮಾಡಿದ ಸುಮಾರು 95 ಸೈಜ್ ಕಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಲ್ಲದೇ ಕಲ್ಲು ಬಂಡೆಗಳನ್ನು ಒಡೆಯಲು ಉಪಯೋಗಿಸುತ್ತಿದ್ದ ಕಂಪ್ರೆಶರ್ ಯಂತ್ರ, 1 ಡ್ರಿಲ್ಲಿಂಗ್ ಮೆಷಿನ್, 4 ದೊಡ್ಡ ಚಮ್ಮಡಿ, 2 ಸಣ್ಣ ಸುತ್ತಿಗೆಗಳು, 4 ಚೇಣ್‌ಗಳು, ಕಬ್ಬಿಣದ ಸರಳು ಹಾಗೂ ಕಬ್ಬಿಣದ ಹಾರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



