ಮೂಗಿಗೆ ನಿಂಬೆ ರಸ ಬಿಟ್ರೆ, ಕೊರೊನಾ ಬರಲ್ವಾ ..? ವೈದ್ಯರು ಕೊಟ್ರು ಅಚ್ಚರಿಯ ಮಾಹಿತಿ..!!!

ತುಂಬಾ ಜನ  ನಿಂಬೆಹಣ್ಣಿನ ರಸವನ್ನು ಮೂಗಿಗೆ ಹಾಕುವ ಬಗ್ಗೆ ಕೇಳುತ್ತಿದ್ದೀರಿ. ಇಂದು ಇದಕ್ಕೆ ಸ್ಪಷ್ಟ ಉತ್ತರ ನೀಡುತ್ತೇನೆ. ಆದರೆ ಅದಕ್ಕೂ ಮೊದಲು ನೀವು ಮೂಗಿನಲ್ಲಿ ಔಷಧ ಹಾಕುವುದರ ಬಗ್ಗೆ ಕೆಲವು ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳಲೇ ಬೇಕಾಗುತ್ತದೆ.

ಆಯುರ್ವೇದದಲ್ಲಿ ನಸ್ಯಕರ್ಮ ಎಂಬ ಮೂಗಿಗೆ ಔಷಧವನ್ನು ಹಾಕುವ ಚಿಕಿತ್ಸೆಯ ಮೂಲಕ ಹಲವಾರು ಖಾಯಿಲೆಗಳನ್ನು ಗುಣಪಡಿ ಸುವ ಬಗ್ಗೆ ವಿವರಣೆಯಿದೆ. ಪಂಚಕರ್ಮದ ಪ್ರಧಾನ ಚಿಕಿತ್ಸೆಗಳಲ್ಲಿ ಇದೂ ಒಂದು. ರೋಗಿಯ ಪ್ರಕೃತಿ, ವಿಕೃತಿ, ಸಮಸ್ಯೆಯ ತೀವ್ರತೆಗಳನ್ನು ನೋಡಿ ನಾವು ಯಾವ ಔಷಧವನ್ನು ಎಷ್ಟು ಪ್ರಮಾಣದಲ್ಲಿ ಮೂಗಿನಲ್ಲಿ ಹಾಕಬೇಕು ಅಥವಾ ರೋಗಿಗೆ ಮನೆಯಲ್ಲಿ ಹಾಕಿಕೊಳ್ಳುವಂತೆ ಸಲಹೆ ಕೊಡಬೇಕು ಎಂಬುದನ್ನು ನಿರ್ಧರಿಸುತ್ತೇವೆ.

ಇಲ್ಲಿ ಇನ್ನೊಂದು interesting ವಿಷಯ ಏನೆಂದರೆ, ಮೂಗಿನಲ್ಲಿ ಔಷಧ ಹಾಕುವುದರಿಂದ ಕಫ ಬರುವುದು ಮತ್ತು ಆ channel clean ಆಗುವುದು ಮಾತ್ರ ಎಂದುಕೊಂಡರೆ ಅದು ಖಂಡಿತ ತಪ್ಪು. ಇದು ಕತ್ತು ಮತ್ತು ಅದರ ಮೇಲಿನ ಎಲ್ಲಾ ಭಾಗಗಳ ಮೇಲೂ ಪರಿಣಾಮವನ್ನು ಬೀರುತ್ತದೆ. ಹಾಗಾಗಿಯೇ ನಾನು ಕತ್ತು ನೋವು, ಕಣ್ಣಿನ ಸಮಸ್ಯೆ, ಮೆದುಳಿನ ಸಮಸ್ಯೆ, ಕೈ ಜುಮ್ಮೆನ್ನುವ ತೊಂದರೆಗಳು ಇರುವವರಿಗೆ ಅವರ ಸಮಸ್ಯೆಗೆ ಅನುಗುಣವಾಗಿ ಮೂಗಿನಲ್ಲಿ ಹಾಕಿಕೊಳ್ಳಲು ಔಷಧ ಕೊಡುತ್ತೇನೆ.

ಈಗ ನಿಂಬೆಹಣ್ಣಿನ ವಿಷಯಕ್ಕೆ ಬರೋಣ. ನಿಂಬೆಹಣ್ಣಿನ ಬಗ್ಗೆ ಹೇಳುವಾಗ “ಧನ್ವಂತರಿ ನಿಘಂಟು” ಎಂಬ ಗ್ರಂಥದಲ್ಲಿ ‘ಕಫೋತ್ಕ್ಲೇಶ’ ಎಂದು ವಿವರಿಸಿದ್ದಾರೆ. ಅಂದರೆ ಕಫವನ್ನು ಹೊರಗೆ ಹಾಕುತ್ತದೆ ಎಂದರ್ಥ. ಆದರೆ ನನಗೆ ತಿಳಿದಂತೆ ಆಯುರ್ವೇದದಲ್ಲಿ ಎಲ್ಲೂ ಅದರ ರಸವನ್ನು ಮೂಗಿಗೆ ಹಾಕುವ ಬಗ್ಗೆ ಹೇಳಿಲ್ಲ. ಜೊತೆಗೆ, ಮೂಗಿನಲ್ಲಿ ನಿಂಬೆರಸ ಹಿಂಡುವುದರಿಂದ ಹಾಳಾಗಿರುವ ಶ್ವಾಸಕೋಶವನ್ನು ಪುನಃ ಮೊದಲಿನಂತೆ ಮಾಡಲು ಸಾಧ್ಯವಿಲ್ಲ.

ಆದರೂ ಮೂಗಿನಲ್ಲಿ ನಿಂಬೆರಸ ಹಾಕುವುದರಿಂದ ಕಫದ ವಾಂತಿ ಯಾದರೆ ಸ್ವಲ್ಪ ಮಟ್ಟಿಗೆ ಉಸಿರಾಡಲು ಅನುಕೂಲವಾಗುತ್ತದೆ ಯೇ ಹೊರತು ಸಮಸ್ಯೆಯಿಂದ ರೋಗಿ ಹೊರಬರುತ್ತಾನೆ ಎನ್ನಲು ಸಾಧ್ಯವೇ ಇಲ್ಲ. ಕೊನೆಯದಾಗಿ, ಯಾವುದೇ ಕಾರಣಕ್ಕೂ ಕೊರೊನಾಕ್ಕೆ ಹೆದರಿ ನಿತ್ಯವೂ ಮೂಗಿಗೆ ನಿಂಬೆರಸ ಬಿಟ್ಟುಕೊಳ್ಳಲು ಪ್ರಾರಂಭಿಸಬೇಡಿ. ಅದರ ಉಷ್ಣ, ತೀಕ್ಷ್ಣ, ಅಮ್ಲ ಗುಣವು ನಿಮ್ಮ ಮೂಗಿನ ಒಳಪದರ, ಕಣ್ಣುಗಳು, ಕೂದಲು ಮತ್ತು ಮೆದುಳಿಗೆ ಸಮಸ್ಯೆ ಮಾಡುತ್ತವೆ.

ಡಾ. ವಿನಾಯಕ್ ಹೆಬ್ಬಾರ್
ಧಾತ್ರಿ ಆಯುರ್ವೇದ, ಶಿರಸಿ

https://kannada.newsnext.live/health/jack-fruit-good-for-immunity-growth-dainties-support/

Comments are closed.