Diabetes Symptoms : ದೇಹದ ಈ ಹೊರ ಅಂಗಾಂಗಗಳು ಹೇಳುತ್ತವೆ ನಿಮಗೆ ಮಧುಮೇಹ ಇದೆಯೇ ಅಥವಾ ಇಲ್ಲವೇ ಎಂದು…

ಇತ್ತೀಚಿನ ದಿನಗಳಲ್ಲಿ ಮಧುಮೇಹ (Diabetes) ಒಂದು ಸಾಮಾನ್ಯ ಕಾಯಿಲೆಯಾಗಿದೆ. ಮತ್ತು ಅದು ಎಲ್ಲಾ ವಯಸ್ಸಿನವರಿಗೂ ಭಯವನ್ನು ಹುಟ್ಟಿಸಿದೆ. ಮಧುಮೇಹಕ್ಕೆ ತುತ್ತಾದವರು ಪ್ರತಿದಿನ ಅದರೊಂದಿಗೆ ಜೀವನ ನಡೆಸುವ ಸ್ಥಿತಿಯಾಗಿದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ (Blood Sugar Level) ಹೆಚ್ಚಾದಾಗ ಬಾಯಾರಿಕೆ, ಆಗಾಗ್ಗೆ ಮೂತ್ರ ವಿಸರ್ಜನೆ, ದಣಿವು, ದೃಷ್ಟಿ ಮಂದವಾಗುವುದು ಮತ್ತು ವಿನಾಕಾರಣ ತೂಕ ನಷ್ಟಗಳಂತಹ ಸಮಸ್ಯೆ ಎದುರಾಗುತ್ತದೆ. ಮಧುಮೇಹದಿಂದ ದೇಹದಲ್ಲಿನ ಸಣ್ಣ ಸಣ್ಣ ರಕ್ತನಾಳಗಳಿಗೆ ಹಾನಿಯುಂಟಾಗುತ್ತದೆ. ಇದರಿಂದ ಅಂಗಾಂಗಗಳಿಗೆ ರಕ್ತವನ್ನು ಸಮರ್ಪಕವಾಗಿ ತಲುಪಲು ಕಷ್ಟವಾಗುತ್ತದೆ. ಅದು ಜೀವಹಾನಿಯನ್ನುಂಟು ಮಾಡಬಹುದು. ದೇಹದ ಒಳಗೆ ಆಗುವ ಬದಲಾವಣೆಗಳಿಗೆ ನಮ್ಮ ದೇಹದ ಹೊರ ಅಂಗಾಂಗಳು ತಕ್ಷಣ ಪ್ರತಿಕ್ರಿಯಿಸುತ್ತದೆ (Diabetes Symptoms ). ದೇಹದ ವಿವಿಧ ಹೊರ ಅಂಗಾಂಗಗಳಲ್ಲಿ ಉಂಟಾಗುವ ರೋಗಲಕ್ಷಣಗಳು ನಿರ್ದಿಷ್ಟ ಕಾಯಿಲೆಯನ್ನು ಹೇಳುತ್ತವೆ. ಹಾಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದರೆ ಈ ಅಂಗಾಂಗಳು ಎಚ್ಚರಿಕೆಯನ್ನು ನೀಡುತ್ತವೆ.

ಮಧುಮೇಹದ ಲಕ್ಷಣಗಳನ್ನು ಹೇಳುವ ದೇಹದ ಹೊರ ಅಂಗಾಂಗಗಳು :

ಕಾಲು ಮತ್ತು ಪಾದ:
ಕಾಲು ಮತ್ತು ಪಾದಗಳು ಊದಿಕೊಳ್ಳುವುದು ಮಧುಮೇಹದ ಒಂದು ಲಕ್ಷಣವಾಗಿದೆ. ಕಾರಣವೇನೆಂದರೆ ರಕ್ತದಲ್ಲಿನ ಅಧಿಕ ಸಕ್ಕರೆಯು ನರಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಪಾದವು ಸಂವೇದನೆಯನ್ನು ಕಳೆದುಕೊಳ್ಳುತ್ತದೆ. ಕಡಿಮೆ ರಕ್ತ ಪರಿಚಲನೆಯಿಂದಾಗಿ ಕಾಲು ಅಥವಾ ಪಾದಗಳಲ್ಲಿ ಆದ ಸೋಂಕು, ಹುಣ್ಣುಗಳನ್ನು ಗುಣಪಡಿಸಲು ಕಷ್ಟವಾಗುತ್ತದೆ.

ಕಣ್ಣು :
ಮಧುಮೇಹವು ರೆಟಿನಾದಲ್ಲಿನ ರಕ್ತನಾಳಗಳ ಮೇಲೆ ಪರಿಣಾಮ ಬೀರಬಹುದು. ಇದು ಮಸುಕಾದ ದೃಷ್ಟಿ, ಕಣ್ಣಿನ ಪೊರೆಗಳು, ಗ್ಲುಕೋಮಾ ಮತ್ತು ಡಯಾಬಿಟಿಕ್ ರೆಟಿನೋಪತಿಯಂತಹ ಕಣ್ಣು ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಸಕಾಲಕ್ಕೆ ಇದಕ್ಕೆ ಚಿಕಿತ್ಸೆಯನ್ನು ನೀಡದಿದ್ದರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳಬೇಕಾಗುತ್ತದೆ.

ಒಸಡುಗಳು :
ಒಸಡಿನ ಕಾಯಿಲೆ ಅಥವಾ ಪೆರಿಯೊಡೊಂಟಲ್‌ ಕಾಯಿಲೆ ಅಧಿಕ ಮಧುಮೇಹದ ಒಂದು ಸಾಮಾನ್ಯ ಸ್ಥಿತಿಯಾಗಿದೆ. ಈ ಕಾಯಿಲೆಯ ರೋಗಲಕ್ಷಣವೆಂದರೆ ಒಸಡುಗಳಲ್ಲಿ ರಕ್ತಸ್ರಾವ, ನೋವು ಮತ್ತು ಒಸಡುಗಳು ಸೂಕ್ಷ ಸಂವೇದಿಗಳಾಗುವುದು ಸೇರಿವೆ.

ನರಗಳು :
ಅಧಿಕ ಮಧುಮೇಹವು ಡಯಾಬಿಟಿಕ್‌ ನ್ಯೂರೋಪತಿ ಎಂಬ ನರ ಸಂಬಂಧಿ ಕಾಯಿಲೆ ಕಾರಣವಾಗಬಹುದು. ಇದು ಮರಗಟ್ಟುವಿಕೆ, ನೋವು ಅಥವಾ ತಾಪಮಾನವನ್ನು ತಡೆದುಕೊಳ್ಳುವ ಶಕ್ತಿ ಕುಂಠಿತವಾಗುವುದು, ಕೈ ಕಾಲುಗಳು ಜೋಮು ಹಿಡಿಯುವುದು, ಬರ್ನಿಂಗ್‌ ಫೀಲಿಂಗ್‌, ತೀಕ್ಷ್ಣ ನೋವು ಮತ್ತು ಸೆಳೆತ, ಹಾಗೂ ತೀವ್ರವಾದ ಪಾದದ ಹಣ್ಣುಗಳು ಮತ್ತು ಸೋಂಕು ಇವೇ ಮೊದಲಾದವುಗಳು ರೋಗಲಕ್ಷಣಗಳಾಗಿವೆ.

ಮಧುಮೇಹಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಆರೋಗ್ಯಕರ ಜೀವನ ಶೈಲಿ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ದೆ, ಸದಾ ಚಟುವಟಿಕೆಯಲ್ಲಿರುವುದು, ಧೂಮಪಾನ ಮತ್ತು ಮಧ್ಯಪಾನದಿಂದ ದೂರವಿರುವುದು ಮುಂತಾದ ಉತ್ತಮ ಹವ್ಯಾಸಗಳು ಮಧುಮೇಹದಿಂದ ನಮ್ಮನ್ನು ದೂರವಿಡುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಕಾಲಕಾಲಕ್ಕೆ ವೈದ್ಯರನ್ನು ಭೇಟಿಯಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು.

ಇದನ್ನೂ ಓದಿ : Makar Sankranti 2023 : ಮಕರ ಸಂಕ್ರಾಂತಿ 2023; ದಿನ ಮತ್ತು ಆಚರಣೆ

ಇದನ್ನೂ ಓದಿ : Yashtimadhu Benefits : ಶೀತ, ಕೆಮ್ಮಿಗೆ ರಾಮಬಾಣ ಯಷ್ಟಿಮಧು; ಇದರ ಕಷಾಯ ಮಾಡುವುದು ಹೇಗೆ ಗೊತ್ತಾ…

(Diabetes Symptoms these body parts that can signal high blood sugar)

Comments are closed.