Eggshell Benefits : ವೇಸ್ಟ್‌ ಎಂದು ಡಸ್ಟ್‌ಬಿನ್‌ಗೆ ಹಾಕುವು ಮೊದಲು ಇದನ್ನೊಮ್ಮೆ ಓದಿ; ಮೊಟ್ಟೆಯ ಮೇಲಿನ ಸಿಪ್ಪೆ ಹೇಗೆ ಪ್ರಯೋಜನಕಾರಿಯಾಗಿದೆ

ಮೊಟ್ಟೆಗಳು (Egg) ಅನೇಕ ಅಗತ್ಯ ಪೋಷಕಾಂಶಗಳನ್ನು ಅಡಗಿಸಿಟ್ಟುಕೊಂಡಿರುವ ಒಂದು ಸಂಪೂರ್ಣ ಆಹಾರ (Complete Food). ಇದು ಸಮತೋಲಿತ ಆಹಾರದ ಭಾಗವೂ ಹೌದು. ಆದರೆ, ನಾವು ಹೆಚ್ಚಾಗಿ ಗಮನ ಹರಿಸುವುದು ಮೊಟ್ಟೆಯ ಬಿಳಿಭಾಗ ಮತ್ತು ಮೊಟ್ಟೆಯ ಹಳದಿ ಲೋಳೆಯ ಮೇಲೆ ಮಾತ್ರ. ಮೊಟ್ಟೆಗಳ ಮೇಲಿರುವ ಬಿಳಿ ಸಿಪ್ಪೆಗಳ (Eggshell) ಬಗ್ಗೆ ಯಾರೂ ಗಮನ ಹರಿಸುವುದಿಲ್ಲ. ಮೊಟ್ಟೆಯ ಸಿಪ್ಪೆಯನ್ನು ಕಸ ಎಂದು ಮಾತ್ರ ಪರಿಗಣಿಸುತ್ತೇವೆ ಮತ್ತು ಅವುಗಳನ್ನು ಎಸೆಯುತ್ತೇವೆ. ಆದರೆ ಮೊಟ್ಟೆಯ ಬಿಳಿಭಾಗ ಮತ್ತು ಹಳದಿ ಲೋಳೆಯ ಹೊರತಾಗಿ ಅದರ ಸಿಪ್ಪೆಗಳು ಸಹ ಅದ್ಭುತ ಪ್ರಯೋಜನಗಳನ್ನು (Eggshell Benefits) ನೀಡುತ್ತವೆ ಎಂದರೆ ಆಶ್ಚರ್ಯವಾಗುತ್ತದೆಯಲ್ಲವೇ? ಮೊಟ್ಟೆಯ ಮೇಲಿನ ಸಿಪ್ಪೆ ಹೇಗೆ ಪ್ರಯೋಜನಕಾರಿಯಾಗಿದೆ ಇಲ್ಲಿದೆ ಓದಿ.

ಮೊಟ್ಟೆಯ ಮೇಲಿನ ಸಿಪ್ಪೆ ಅಥವಾ ಚಿಪ್ಪುಗಳನ್ನು ‘ಎಗ್‌ಶೆಲ್’ (Eggshell) ಎಂದು ಕರೆಯಲಾಗುತ್ತದೆ. ಇವುಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯಕಾರಿ ಎಂದು ಸಾಬೀತಾಗಿದೆ. ಅಧ್ಯಯನದ ಪ್ರಕಾರ, ಮೊಟ್ಟೆಯ ಸಿಪ್ಪೆಗಳು ಕ್ಯಾಲ್ಸಿಯಂ ಕಾರ್ಬೋನೇಟ್, ಪ್ರೋಟೀನ್ ಮತ್ತು ಇತರ ಅಗತ್ಯ ಖನಿಜಗಳನ್ನು ಹೊಂದಿರುತ್ತವೆ. ಪ್ರತಿ ಶೆಲ್ ಸುಮಾರು 40 ಪ್ರತಿಶತದಷ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಷನ್‌ ವರದಿಯ ಪ್ರಕಾರ, ಅರ್ಧ ಮೊಟ್ಟೆಯ ಸಿಪ್ಪೆ ವಯಸ್ಕರ ದೈನಂದಿನ ಕ್ಯಾಲ್ಸಿಯಂ ಅಗತ್ಯವನ್ನು ಆರಾಮವಾಗಿ ಪೂರೈಸಬಲ್ಲದು.

ಮೊಟ್ಟೆಯ ಮೇಲಿನ ಸಿಪ್ಪೆಗಳ ಪ್ರಯೋಜನಗಳು:

  1. ಮೂಳೆಗಳ ಆರೋಗ್ಯ ಹೆಚ್ಚಿಸುತ್ತದೆ:
    ಕ್ಯಾಲ್ಸಿಯಂ ಕಾರ್ಬೋನೇಟ್ ಮೊಟ್ಟೆಯ ಮೇಲಿನ ಸಿಪ್ಪೆಯಲ್ಲಿ ಹೇರಳವಾಗಿರುತ್ತದೆ. ಇದು ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಇದಲ್ಲದೆ, ಮೊಟ್ಟೆಯ ಸಿಪ್ಪೆಗಳು ಮೆಗ್ನೀಸಿಯಮ್, ಫ್ಲೋರೈಡ್ ಮತ್ತು ಇತರ ಅಗತ್ಯ ಖನಿಜಗಳ ಉತ್ತಮ ಮೂಲಗಳಾಗಿವೆ.
  2. ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ:
    ಆಸ್ಟಿಯೊಪೊರೋಸಿಸ್ ಎನ್ನುವುದು ಮೂಳೆಗಳನ್ನು ದುರ್ಬಲಗೊಳಿಸುವ ಒಂದು ಕಾಯಿಲೆಯಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿದ್ದಾರೆ. ಕ್ಯಾಲ್ಸಿಯಂ ಕಡಿಮೆಯಿರುವ ಆಹಾರಗಳ ಸೇವನೆ ಈ ಸಮಸ್ಯೆಗೆ ಕಾರಣ. ಆಸ್ಟಿಯೊಪೊರೋಸಿಸ್‌ ನಿಂದ ರಕ್ಷಿಸಿಕೊಳ್ಳಲು, ಆಹಾರದಲ್ಲಿ ಮೊಟ್ಟೆಯ ಸಿಪ್ಪೆಗಳನ್ನು ಸೇರಿಸಿಕೊಳ್ಳಬಹುದು. ಮೊಟ್ಟೆಯ ಸಿಪ್ಪೆಯಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇರುವುದರಿಂದ ಅದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
  3. ಕೀಲುಗಳ ಆರೋಗ್ಯಕ್ಕೆ ಪ್ರಯೋಜನಕಾರಿ:
    ಮೊಟ್ಟೆಯ ಸಿಪ್ಪೆಗಳು ಕೀಲುಗಳ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಮೊಟ್ಟೆಯ ಸಿಪ್ಪೆಗಳನ್ನು ಪುಡಿ ರೂಪದಲ್ಲಿ ಸೇವಿಸಲು ಬಯಸಿದರೆ, ಮೊಟ್ಟೆಯ ಒಳಭಾಗದಲ್ಲಿ ಕಂಡುಬರುವ ತೆಳು ಪೊರೆಯನ್ನು ತೆಗೆದು ಹಾಕದಂತೆ ಎಚ್ಚರಿಕೆ ವಹಿಸಿ. ಏಕೆಂದರೆ ಅದು ಕೀಲುಗಳ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ.

ಮೊಟ್ಟೆಯ ಮೇಲಿನ ಸಿಪ್ಪೆ ತಿನ್ನುವುದು ಹೇಗೆ?
ಮೊಟ್ಟೆಯ ಮೇಲಿನ ಸಿಪ್ಪೆಗಳನ್ನು ತಿನ್ನಲು ಉತ್ತಮ ಮಾರ್ಗವೆಂದರೆ ಮೊದಲು ಮೊಟ್ಟೆಗಳನ್ನು ಚೆನ್ನಾಗಿ ಕುದಿಸುವುದು. ನಂತರ ಮೊಟ್ಟೆಯ ಸಿಪ್ಪೆಯನ್ನು ಒಡೆದು ಪುಡಿ ಮಾಡುವುದು. ಅದನ್ನು ಆಹಾರದೊಂದಿಗೆ ಸಹ ಸೇವಿಸಬಹುದು. ಅದನ್ನು ಜ್ಯೂಸ್ ಅಥವಾ ನೀರಿನೊಂದಿಗೂ ಕೂಡ ಸೇವಿಸಬಹುದು. ಆದಾರೂ, ಆಹಾರದಲ್ಲಿ ಮೊಟ್ಟೆಯ ಸಿಪ್ಪೆಗಳನ್ನು ಸೇರಿಸುವ ಮೊದಲು, ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಏಕೆಂದರೆ ಕೆಲವರಿಗೆ ಇದರಿಂದ ಅಲರ್ಜಿಗಳಿರುತ್ತದೆ.

ಮೊಟ್ಟೆಯ ಸಿಪ್ಪೆಗಳಿಂದ ಸಂಭವಿಸಬಹುದಾದ ಅಪಾಯಗಳು:
ಮೊಟ್ಟೆಯ ಸಿಪ್ಪೆ (ಚಿಪ್ಪು) ಯನ್ನು ಪುಡಿ ಮಾಡಿ ಮಾತ್ರ ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ದೊಡ್ಡ ತುಂಡುಗಳು ಗಂಟಲು ಮತ್ತು ಅನ್ನನಾಳಕ್ಕೆ ಹಾನಿ ಉಂಟು ಮಾಡಬಹುದು. ಜೊತೆಗೆ, ಮೊಟ್ಟೆಯ ಸಿಪ್ಪೆಯ ಮೇಲೆ ಸಾಲ್ಮೊನೆಲ್ಲಾ ಎಂಟೆರಿಟಿಡಿಸ್‌ನಂತಹ ಬ್ಯಾಕ್ಟೀರಿಯಾಗಳಿವೆ. ಅದರಿಂದ ಆಹಾರ ವಿಷವಾಗುತ್ತದೆ, ಅದನ್ನು ತಪ್ಪಿಸಲು ತಿನ್ನುವ ಮೊದಲು ಅವುಗಳನ್ನು ಚೆನ್ನಾಗಿ ಕುದಿಸಲು ಸಲಹೆ ನೀಡಲಾಗುತ್ತದೆ.

ಇದನ್ನೂ ಓದಿ : Skin Care Tips: ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ರೋಸ್‌ ವಾಟರ್‌ಗೆ ಈ ವಸ್ತುಗಳನ್ನು ಸೇರಿಸಿ ಹಚ್ಚಿ; ಮ್ಯಾಜಿಕ್‌ ನೀವೇ ನೋಡಿ

ಇದನ್ನೂ ಓದಿ : Hibiscus For Hair: ಕೇಶ ಸೌಂದರ್ಯಕ್ಕೆ ನೀವೂ ದಾಸವಾಳ ಬಳಸಿ ನೋಡಿ !

(ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸೂಚನೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ)

(Eggshell Benefits, Know why you should eat eggshells)

Comments are closed.