ಕಲ್ಲಂಗಡಿ ತಿಂದ ನಾಲ್ವರ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಣ್ಣಿನಲ್ಲಿ ಪತ್ತೆಯಾಯ್ತು ಇಲಿ ಪಾಷಾಣ!
ಏಪ್ರಿಲ್ 25ರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ, ಮೃತರು ಸೇವಿಸಿದ ಕಲ್ಲಂಗಡಿ ಹಣ್ಣಿನಲ್ಲಿ ಜಿಂಕ್ ಫಾಸೈಡ್ ಅಂಶವಿತ್ತು ಎಂದು ತಿಳಿದುಬಂದಿದೆ.

ಬಿರಿಯಾನಿ ತಿಂದ ಬಳಿಕ ಕಲ್ಲಂಗಡಿ ತಿಂದು ಮುಂಬೈನ ಫೈಧೋಹಿ ಎಂಬಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಪ್ರಕರಣವು ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಬಿರಿಯಾನಿ ಹಾಗೂ ಕಲ್ಲಂಗಡಿ ಒಟ್ಟಿಗೆ ಸೇವಿಸಿದ ಪರಿಣಾಮ ಫುಡ್ ಪಾಯಿಸನ್ನಿಂದ ಇವರೆಲ್ಲ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಪರೀಕ್ಷಾ ವರದಿಯಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಏಪ್ರಿಲ್ 25ರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ, ಮೃತರು ಸೇವಿಸಿದ ಕಲ್ಲಂಗಡಿ ಹಣ್ಣಿನಲ್ಲಿ ಜಿಂಕ್ ಫಾಸೈಡ್ ಅಂಶವಿತ್ತು ಎಂದು ತಿಳಿದುಬಂದಿದೆ. ಇದು ಇಲಿ ಪಾಷಾಣ ತಯಾರಿಸಲು ಬಳಕೆ ಮಾಡುವ ರಾಸಾಯನಿಕವಾಗಿದೆ. ಮುಂಬೈ ಪೊಲೀಸರು ಮೃತರ ಅಂಗಾಂಗಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಕಳುಹಿಸಿದ್ದರು. ಈ ಪರೀಕ್ಷಾ ವರದಿಯಲ್ಲಿ ಇದೀಗ ಶಾಕಿಂಗ್ ಮಾಹಿತಿ ಹೊರಬಿದ್ದಿದೆ.
ಮುಂಬೈನ ನಿವಾಸಿಗಳಾದ 40 ವರ್ಷದ ಅಬ್ದುಲ್ಲಾ, ಅವರ ಪತ್ನಿ 35 ವರ್ಷದ ನಜ್ರನ್ ಹಾಗೂ ಮಕ್ಕಳಾದ 13 ವರ್ಷದ ಜೈನಾಬ್ ಹಾಗೂ 16 ವರ್ಷದ ಆಯೇಷಾ ಅವರ ಮನೆಯಲ್ಲಿ ಅತಿಥಿಗಳಿಗೆ ಔತಣ ಕೂಟ ಆಯೋಜಿಸಲಾಗಿತ್ತು. ರಾತ್ರಿ ಐವರು ಅತಿಥಿಗಳ ಜೊತೆಯಲ್ಲಿ ಇವರು ಬಿರಿಯಾನಿ ಸೇವಿಸಿದ್ದರು.ಅತಿಥಿಗಳು ಮನೆಯಿಂದ ತೆರಳಿದ ಬಳಿಕ ಇವರೆಲ್ಲ ಕಲ್ಲಂಗಡಿ ಹಣ್ಣು ಸೇವನೆ ಮಾಡಿದ್ದರು . ಕೂಡಲೇ ಇವರೆಲ್ಲರಿಗೂ ವಾಂತಿ, ತಲೆಸುತ್ತು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ದಾಖಲು ಮಾಡಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರೂ ಮೃತಪಟ್ಟಿದ್ದರು.
ಇದೀಗ ಇವರು ಸೇವನೆ ಮಾಡಿದ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣ ಪತ್ತೆಯಾಗಿದ್ದು, ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಷಾಣ ಹೇಗೆ ಬಂತು ಎನ್ನುವುದು ಸದ್ಯದ ಯಕ್ಷ ಪ್ರಶ್ನೆಯಾಗಿದೆ. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.



