ಇಂಡಿಯನ್ ಪ್ರೀಮಿಯರ್ ಲೀಗ್ (IPL) ಬೆನ್ನಲ್ಲೇ ಶ್ರೀಲಂಕಾ ಎ ತಂಡದ ವಿರುದ್ದದ ಏಕದಿನ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ್ದ ವೈಭವ್ ಸೂರ್ಯವಂಶಿ ಭವಿಷ್ಯದ ಬಗ್ಗೆ ದಕ್ಷಿಣ ಆಫ್ರಿಕಾದ ಮಾಜಿ ದಿಗ್ಗಜ ಡ್ಯಾರಿಲ್ ಕಲ್ಲಿನನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಶೈಲಿ ದೈಹಿಕ ಫಿಟ್‌ನೆಸ್ ನಿರ್ವಹಣೆಯ ಬಗ್ಗೆ ಎಚ್ಚರಿಕೆ ವಹಿಸದೇ ಇದ್ರೆ ಅವರು ಸುಧೀರ್ಘ ಅವಧಿಯವರೆಗೆ ಕ್ರಿಕೆಟ್ ವೃತ್ತಿ ಜೀವನ ಅಪಾಯಕ್ಕೆ ಸಿಲುಕಬಹುದು ಎಂದು ಕಲ್ಲಿನನ್ ಎಚ್ಚರಿಸಿದ್ದಾರೆ.
1990ರ ದಶಕದಲ್ಲಿ ದಕ್ಷಿಣ ಆಫ್ರಿಕಾ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದ, 208 ಅಂತರರಾಷ್ಟ್ರೀಯ ಪಂದ್ಯಗಳ ಅನುಭವ ಹೊಂದಿರುವ ಕಲ್ಲಿನನ್, ವೈಭವ್ ಅವರ ಆಟದಲ್ಲಿನ ಪ್ರಮುಖ ಎರಡು ದೈಹಿಕ ಅಪಾಯಗಳನ್ನು ಎತ್ತಿ ತೋರಿಸಿದ್ದಾರೆ. ಕೇವಲ 15 ವಯಸ್ಸಿನಲ್ಲೇ ವೈಭವ್ ಸೂರ್ಯವಂಶಿ ಅತ್ಯಂತ ಭಾರವಾದ ಬ್ಯಾಟ್ ಬಳಸಿ ವೇಗವಾಗಿ ಸ್ವಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಅವರ ಮಣಿಕಟ್ಟು (Wrist), ಮೊಣಕೈ (Elbow) ಹಾಗೂ ಕೀಲುಗಳ ಮೇಲೆ ವಿಪರೀತ ಒತ್ತಡ ಹೇರುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
Also Read: ಶ್ರೇಯಸ್ ಅಯ್ಯರ್ ನಾಯಕತ್ವಕ್ಕೆ ಎದುರಾಯ್ತು ಸಂಕಷ್ಟ: ಖಾಯಂ ಕ್ಯಾಪ್ಟನ್ ಫಿಕ್ಸ್ ಮಾಡಲು ಬಿಸಿಸಿಐ ಮಾಸ್ಟರ್ ಪ್ಲಾನ್!
ವೈಭವ್ ಅವರ ದೇಹ ಇನ್ನೂ ಸಂಪೂರ್ಣವಾಗಿ ಬೆಳೆಯುವ ಹಂತದಲ್ಲಿದೆ. ಇಂತಹ ಸಮಯದಲ್ಲಿ ನಿರಂತರವಾಗಿ ಸಿಕ್ಸರ್-ಬೌಂಡರಿಗಳಿಗಾಗಿ ಅತಿಯಾದ ಆಕ್ರಮಣಕಾರಿ ‘ಪವರ್-ಹಿಟ್ಟಿಂಗ್’ ಮಾಡುವುದರಿಂದ ಮೂಳೆಗಳು ಮತ್ತು ಮಾಂಸಖಂಡಗಳಿಗೆ ಭವಿಷ್ಯದಲ್ಲಿ ಗಂಭೀರ ಹಾನಿಯಾಗಬಹುದು. ಜೊತೆಗೆ ಅತೀ ಸಣ್ಣ ವಯಸ್ಸಿನಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಆಡುವುದು ಕೂಡ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಲಿದೆ. ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು ಮಣಿಕಟ್ಟಿನ ಸಮಸ್ಯೆಗೆ ಒಳಗಾಗಿರುವ ಉದಾಹರಣೆಯನ್ನೂ ಕೂಡ ಕಲ್ಲಿನನ್ ನೀಡಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಅದ್ಭುತ ಮತ್ತು ಅಪರೂಪದ ಪ್ರತಿಭೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಕಲ್ಲಿನನ್, ಈ ಯುವ ಆಟಗಾರ ತನ್ನ ಕಾರ್ಯದೊತ್ತಡ ಹಾಗೂ ದೇಹದ ಫಿಟ್‌ನೆಸ್ ಅನ್ನು ಸರಿಯಾಗಿ ಬ್ಯಾಲೆನ್ಸ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಗಾಯಗಳು ಅವರ ಸುದೀರ್ಘ ಕ್ರಿಕೆಟ್ ಭವಿಷ್ಯಕ್ಕೆ ಮುಳ್ಳಾಗಬಹುದು ಎಂದು ಕಿವಿಮಾತು ಹೇಳಿದ್ದಾರೆ.
Wonder Boy Vaibhav Suryavanshi concerns Important advice from veterans


