ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್ : ಇಂದಿನಿಂದ ಮಧ್ಯರಾತ್ರಿಯವರೆಗೂ ಟಿಕೆಟ್ ಬುಕ್ಕಿಂಗ್ಗೆ ಅವಕಾಶ
ರೈಲ್ವೆ ಇಲಾಖೆಯಲ್ಲಿ ದಿನಕ್ಕೊಂದು ಸುಧಾರಣೆಗಳು ಬರುತ್ತಲೇ ಇದ್ದು ದಿನಕಳೆದಂತೆ ಭಾರತೀಯ ರೈಲ್ವೆ ಇಲಾಖೆ ಸೇವೆಯು ಹೆಚ್ಚೆಚ್ಚು ಜನಸ್ನೇಹಿಯಾಗುತ್ತಿದೆ. ಈ ಮಾತಿಗೆ ಮತ್ತೊಂದು ಪುರಾವೆ ಎಂಬಂತೆ ಆಧಾರ್ ದೃಢೀಕೃತ ಬಳಕೆದಾರರಿಗೆ ಟಿಕೆಟ್ ಬುಕ್ಕಿಂಗ್ ಮಾಡುವ ಅವಧಿಯನ್ನು ಮಧ್ಯರಾತ್ರಿಯರವರೆಗೂ ವಿಸ್ತರಿಸಲಾಗಿದೆ. ಇಂದಿನಿಂದ ಗ್ರಾಹಕರು ಮಧ್ಯರಾತ್ರಿಯವರೆಗೂ ತಮ್ಮ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶ ಪಡೆಯಲಿದ್ದಾರೆ.
ಐಆರ್ಸಿಟಿಸಿ ಹಾಗೂ ರೈಲ್ವೆ ಆ್ಯಪ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ಮಾತ್ರ ಈ ಅವಕಾಶ ಸಿಗಲಿದೆ. ಈ ಮೊದಲು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಟಿಕೆಟ್ ಬುಕ್ಕಿಂಗ್ ಅವಕಾಶ ನೀಡಲಾಗಿತ್ತು. ಜನವರಿ 5ರ ಬಳಿಕ ಈ ಸೇವೆಯನ್ನು ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಸಮಯವನ್ನು ಮಧ್ಯರಾತ್ರಿಯವರೆಗೂ ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ: ಕರಾವಳಿ ಭಾಗದ ಜನತೆಗೆ ಗುಡ್ನ್ಯೂಸ್.. ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್ಪ್ರೆಸ್
ದಲ್ಲಾಳಿಗಳು ನಕಲಿ ಖಾತೆಗಳ ಮೂಲಕ ಟಿಕೆಟ್ ಬುಕ್ ಮಾಡುವದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿರುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಇನ್ಮುಂದೆ ರೈಲ್ವೆ ಪ್ರಯಾಣಿಕರು ದಲ್ಲಾಳಿಗಳ ಕಾಟವಿಲ್ಲದೇ ಸಂಪೂರ್ಣ ದಿನ ರೈಲ್ವೆ ಟಿಕೆಟ್ ಬುಕ್ಕಿಂಗ್ ಅವಕಾಶ ಪಡೆಯಬೇಕು ಎಂಬ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದೆ.



