ಅನ್ನಭಾಗ್ಯ ಗೋಧಿ ಅಕ್ರಮ ಸಾಗಾಟ; ಚಿಕ್ಕಬಳ್ಳಾಪುರದಲ್ಲಿ 14 ಟನ್ ಜಪ್ತಿ, ತನಿಖೆ ಚುರುಕು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಗೆ ಮೀಸಲಾಗಿದ್ದ 14 ಟನ್ ಗೋಧಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿ ಜಾಲದ ಹಿಂದೆ ಇರುವವರ ಪತ್ತೆಗೆ ತನಿಖೆ ಮುಂದುವರಿದಿದೆ.

ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ತಲುಪಬೇಕಿದ್ದ ಗೋಧಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 14 ಟನ್ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ.

ಚಿಂತಾಮಣಿಯ ಹೆಚ್ ಕ್ರಾಸ್ ಸಮೀಪ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಕ್ಯಾಂಟರ್ ವಾಹನವನ್ನು ತಡೆದು ಪರಿಶೀಲಿಸಿದ ವೇಳೆ ಸುಮಾರು 250 ಚೀಲ ಗೋಧಿ ಪತ್ತೆಯಾಗಿದೆ. ಈ ಗೋಧಿಯನ್ನು ಚಿಂತಾಮಣಿಯಿಂದ ಹೊಸಕೋಟೆ ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಜಪ್ತಿಯಾದ ಗೋಧಿಯು ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳ ವಿದ್ಯಾರ್ಥಿಗಳ ಬಳಕೆಗೆ ಮೀಸಲಾಗಿದ್ದ ದಾಸ್ತಾನು ಎನ್ನುವ ಶಂಕೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ಆಹಾರಕ್ಕಾಗಿ ಸರ್ಕಾರ ಒದಗಿಸಿದ್ದ ಪಡಿತರವನ್ನು ಅಕ್ರಮ ಮಾರ್ಗದಲ್ಲಿ ಮಾರಾಟ ಮಾಡಲು ಯತ್ನಿಸಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಹಿಂದೆ ಅನ್ನಭಾಗ್ಯ ಯೋಜನೆಯ ಅಕ್ಕಿ, ಸಕ್ಕರೆ ಸೇರಿದಂತೆ ವಿವಿಧ ಆಹಾರ ಧಾನ್ಯಗಳನ್ನು ಕಾಳದಂಧೆಯಲ್ಲಿ ಮಾರಾಟ ಮಾಡಿದ ಪ್ರಕರಣಗಳು ಹಲವು ಬಾರಿ ಬೆಳಕಿಗೆ ಬಂದಿದ್ದವು. ಇದೀಗ ಗೋಧಿ ಅಕ್ರಮ ಸಾಗಾಟವೂ ಪತ್ತೆಯಾಗಿರುವುದು ಆಹಾರ ಧಾನ್ಯಗಳ ದುರುಪಯೋಗದ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.

ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಗೋಧಿ ಯಾರಿಂದ ಸಾಗಿಸಲಾಗುತ್ತಿತ್ತು, ಇದರ ಹಿಂದೆ ಯಾರು ಇದ್ದಾರೆ ಹಾಗೂ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ. ಅಕ್ರಮ ಜಾಲದ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories