ಬೆಂಗಳೂರು ಆಸ್ತಿ ತೆರಿಗೆ ಏರಿಕೆ? ಎಲಿವೇಟೆಡ್ ಕಾರಿಡಾರ್ಗೆ ಹೊಸ ಪ್ರಸ್ತಾಪ
ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಅಗತ್ಯ ಹಣ ಸಂಗ್ರಹಿಸಲು ಆಸ್ತಿ ತೆರಿಗೆಯಲ್ಲಿ ವಿಶೇಷ ಸೆಸ್ ವಿಧಿಸುವ ಪ್ರಸ್ತಾಪ ಮುಂದಿಡಲಾಗಿದೆ. ಯೋಜನೆಯಿಂದ ಲಾಭವಾಗುವ ಪ್ರದೇಶಗಳ ಆಸ್ತಿ ಮಾಲೀಕರ ಮೇಲೆ ಹೆಚ್ಚುವರಿ ಹೊರೆ ಬೀಳಬಹುದು.

ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಅಗತ್ಯವಿರುವ ಸಾವಿರಾರು ಕೋಟಿ ರೂಪಾಯಿ ವೆಚ್ಚವನ್ನು ಭರಿಸಲು ಹೊಸ ಹಣಕಾಸು ಮಾದರಿಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಅದರ ಭಾಗವಾಗಿ, ಯೋಜನೆಯಿಂದ ಲಾಭ ಪಡೆಯುವ ಪ್ರದೇಶಗಳ ಆಸ್ತಿ ಮಾಲೀಕರಿಂದ ಹೆಚ್ಚುವರಿ ಆಸ್ತಿ ತೆರಿಗೆ ಅಥವಾ ವಿಶೇಷ ಸೆಸ್ ಸಂಗ್ರಹಿಸುವ ಪ್ರಸ್ತಾಪವನ್ನು ಯೋಜನೆಯ ವಿಸ್ತೃತ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ ಪ್ರಕಾರ, ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾದ ಬಳಿಕ ಸಂಚಾರ ವ್ಯವಸ್ಥೆ ಸುಧಾರಣೆಯಾಗುವುದರಿಂದ ಆ ಭಾಗಗಳ ಜಮೀನು ಹಾಗೂ ಕಟ್ಟಡಗಳ ಮೌಲ್ಯ ಏರಿಕೆಯಾಗುವ ಸಾಧ್ಯತೆ ಇದೆ. ಈ ಲಾಭವನ್ನು ಪಡೆಯುವ ಆಸ್ತಿ ಮಾಲೀಕರಿಂದಲೇ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ವೆಚ್ಚವನ್ನು ಸಂಗ್ರಹಿಸುವುದು ಸೂಕ್ತ ಎಂಬ ಅಭಿಪ್ರಾಯವನ್ನು ವರದಿ ವ್ಯಕ್ತಪಡಿಸಿದೆ.
ಯೋಜನೆಯ ಪ್ರಮುಖ ವಿಶೇಷತೆಯೆಂದರೆ ಈ ಕಾರಿಡಾರ್ಗಳಲ್ಲಿ ಟೋಲ್ ಸಂಗ್ರಹಿಸುವ ವ್ಯವಸ್ಥೆ ಇರುವುದಿಲ್ಲ. ಮಾರ್ಗ ಮಧ್ಯೆ ಹಲವು ರ್ಯಾಂಪ್ಗಳು, ಸಂಪರ್ಕ ರಸ್ತೆಗಳು ಹಾಗೂ ಈಗಿರುವ ಫ್ಲೈಓವರ್ಗಳು ಇರುವ ಕಾರಣ ಟೋಲ್ ಪ್ಲಾಜಾಗಳನ್ನು ಸ್ಥಾಪಿಸುವುದು ಪ್ರಾಯೋಗಿಕವಾಗುವುದಿಲ್ಲ ಎಂದು ಡಿಪಿಆರ್ನಲ್ಲಿ ವಿವರಿಸಲಾಗಿದೆ. ಹೀಗಾಗಿ ಈ ಯೋಜನೆಗಳನ್ನು ಸರ್ಕಾರವೇ EPC ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ.
ಟೋಲ್ ಮೂಲಕ ಆದಾಯ ಸಾಧ್ಯವಾಗದ ಹಿನ್ನೆಲೆಯಲ್ಲಿ ‘ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸಿಂಗ್’ ಮಾದರಿಯನ್ನು ಅನುಸರಿಸಲು ಶಿಫಾರಸು ಮಾಡಲಾಗಿದೆ. ಇದರಡಿ ಎಲಿವೇಟೆಡ್ ಕಾರಿಡಾರ್ ಸುತ್ತಮುತ್ತಲಿನ ಪ್ರಭಾವಿತ ವಲಯದ ಆಸ್ತಿಗಳ ಮೇಲೆ ಹೆಚ್ಚುವರಿ ಲೇವಿ ಅಥವಾ ಸೆಸ್ ವಿಧಿಸಿ, ಅದನ್ನು ಈಗಿರುವ ಆಸ್ತಿ ತೆರಿಗೆ ವ್ಯವಸ್ಥೆಯಲ್ಲೇ ಸೇರಿಸುವ ಚಿಂತನೆ ನಡೆಯುತ್ತಿದೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಮೂಲಕ ಸುಮಾರು ₹13,262 ಕೋಟಿ ವೆಚ್ಚದಲ್ಲಿ 126 ಕಿಲೋಮೀಟರ್ ಉದ್ದದ 11 ಎಲಿವೇಟೆಡ್ ಕಾರಿಡಾರ್ ಹಾಗೂ 9 ಫ್ಲೈಓವರ್ಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ದೊರೆತಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಯಾದರೆ ನಗರದ ಸಂಚಾರ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ.
ಸದ್ಯ ಇದು ಡಿಪಿಆರ್ನಲ್ಲಿರುವ ಪ್ರಸ್ತಾಪವಾಗಿದ್ದು, ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕಿದೆ. ತೆರಿಗೆ ಹೆಚ್ಚಳದ ಕುರಿತು ಅಧಿಕೃತ ಘೋಷಣೆ ಹೊರಬಂದ ನಂತರವೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

