ಮಳೆ ಕೊರತೆ ಎಫೆಕ್ಟ್! ಬೆಂಗಳೂರಿನಲ್ಲಿ ತರಕಾರಿ ಬೆಲೆ ಏರಿಕೆ, ಗ್ರಾಹಕರಿಗೆ ಶಾಕ್

ಅನಾವೃಷ್ಟಿ ಹಾಗೂ ನೆರೆಯ ರಾಜ್ಯಗಳಲ್ಲಿನ ಹವಾಮಾನ ವೈಪರೀತ್ಯದ ಪರಿಣಾಮ ಬೆಂಗಳೂರಿನಲ್ಲಿ ತರಕಾರಿ ಬೆಲೆ ಭಾರೀ ಏರಿಕೆಯಾಗಿದೆ. ಬೀನ್ಸ್, ಬದನೆಕಾಯಿ ಸೇರಿದಂತೆ ಹಲವು ತರಕಾರಿಗಳು ನೂರರ ಗಡಿ ದಾಟಿ ಗ್ರಾಹಕರಿಗೆ ಹೊರೆ ಹೆಚ್ಚಿಸಿವೆ.

ಬೆಂಗಳೂರು ನಗರದಲ್ಲಿ ತರಕಾರಿ ಖರೀದಿಗೆ ತೆರಳುವ ಗ್ರಾಹಕರಿಗೆ ಈ ವಾರ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹಲವು ಅಗತ್ಯ ತರಕಾರಿಗಳ ಬೆಲೆ ಏಕಾಏಕಿ ಹೆಚ್ಚಳ ಕಂಡಿದ್ದು, ದಿನನಿತ್ಯದ ಅಡುಗೆ ವೆಚ್ಚವೂ ಏರಿಕೆಯಾಗಿದೆ. ವಿಶೇಷವಾಗಿ ಬೀನ್ಸ್, ಬಿಳಿ ಬದನೆಕಾಯಿ, ನುಗ್ಗೆಕಾಯಿ ಸೇರಿದಂತೆ ಹಲವು ತರಕಾರಿಗಳು ಕೆಜಿಗೆ 100 ರೂಪಾಯಿಗಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ.

ರಾಜ್ಯದಲ್ಲಿ ಮಳೆಯ ಕೊರತೆ ಹಾಗೂ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳದಂತಹ ನೆರೆಯ ರಾಜ್ಯಗಳಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ತರಕಾರಿ ಉತ್ಪಾದನೆ ಕುಂಠಿತವಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನ ಕೆಆರ್ ಮಾರುಕಟ್ಟೆ ಸೇರಿದಂತೆ ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪೂರೈಕೆ ಕಡಿಮೆಯಾಗಿದ್ದು, ಬೆಲೆಗಳು ಗಗನಕ್ಕೇರಿವೆ.

ಪ್ರಸ್ತುತ ಚಿಲ್ಲರೆ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ ಕೆಜಿಗೆ 200ರಿಂದ 220 ರೂಪಾಯಿ, ಬೆಳ್ಳುಳ್ಳಿ ಕೂಡ 200ರಿಂದ 220 ರೂಪಾಯಿ, ಬೀನ್ಸ್ 115ರಿಂದ 140 ರೂಪಾಯಿ, ಮೆಂತ್ಯ ಸೊಪ್ಪು 120ರಿಂದ 130 ರೂಪಾಯಿ ಹಾಗೂ ಬಿಳಿ ಬದನೆಕಾಯಿ 110ರಿಂದ 120 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಬಟಾಣಿ ಮತ್ತು ಹಸಿಮೆಣಸಿನಕಾಯಿ 100ರಿಂದ 120 ರೂಪಾಯಿ, ಕ್ಯಾರೆಟ್ ಹಾಗೂ ಕ್ಯಾಪ್ಸಿಕಂ 80ರಿಂದ 100 ರೂಪಾಯಿ ದರ ತಲುಪಿವೆ.

ಇದರ ನಡುವೆಯೇ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿರುವುದು ಗ್ರಾಹಕರಿಗೆ ಕೊಂಚ ಸಮಾಧಾನ ನೀಡಿದೆ. ಟೊಮೆಟೊ ಸಗಟು ಮಾರುಕಟ್ಟೆಯಲ್ಲಿ 10ರಿಂದ 15 ರೂಪಾಯಿಗೆ ದೊರೆಯುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ 15ರಿಂದ 20 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಈರುಳ್ಳಿ ಕೂಡ ಕೆಜಿಗೆ 20ರಿಂದ 25 ರೂಪಾಯಿಗೆ ಲಭ್ಯವಾಗಿದೆ.

ಇನ್ನೊಂದೆಡೆ ಮೊಟ್ಟೆಯ ದರವೂ ಏರಿಕೆಯಾಗಿದೆ. ಕೆಲವೇ ದಿನಗಳ ಹಿಂದೆ 6.50 ರೂಪಾಯಿ ಇದ್ದ ಒಂದು ಕೋಳಿ ಮೊಟ್ಟೆ ಈಗ ಸುಮಾರು 8 ರೂಪಾಯಿಗೆ ಮಾರಾಟವಾಗುತ್ತಿದ್ದು, ಅಡುಗೆ ಮನೆಯ ಖರ್ಚು ಮತ್ತಷ್ಟು ಹೆಚ್ಚಿಸಿದೆ.

ತರಕಾರಿ ಬೆಲೆ ಹೆಚ್ಚಳದ ಪರಿಣಾಮ ಗ್ರಾಹಕರು ಹಿಂದಿನಂತೆ ಕೆಜಿಗಟ್ಟಲೆ ಖರೀದಿಸುವ ಬದಲು ಕಾಲು ಕೆಜಿ ಅಥವಾ ಅರ್ಧ ಕೆಜಿಗೆ ಸೀಮಿತರಾಗಿದ್ದಾರೆ. ಇದರಿಂದ ವ್ಯಾಪಾರವೂ ಕುಂಠಿತವಾಗಿದ್ದು, ಮಾರುಕಟ್ಟೆಯಲ್ಲಿ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಒಟ್ಟಾರೆ ಹವಾಮಾನ ವೈಪರೀತ್ಯದಿಂದ ಉಂಟಾದ ಉತ್ಪಾದನಾ ಕೊರತೆ ಬೆಂಗಳೂರಿನ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಿದ್ದು, ಮುಂದಿನ ದಿನಗಳಲ್ಲಿ ಮಳೆ ಪರಿಸ್ಥಿತಿ ಸುಧಾರಿಸಿದರೆ ಮಾತ್ರ ತರಕಾರಿ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories