ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಹಾಹಾಕಾರ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ತುರ್ತು ಪತ್ರ

ಬೆಂಗಳೂರಿನ ಹೋಟೆಲ್​ಗಳು, ರೆಸ್ಟಾರೆಂಟ್​ಗಳು, ಪಿಜಿಗಳು ಹಾಗೂ ಕ್ಯಾಟರಿಂಗ್​ ವ್ಯವಸ್ಥೆಗಳನ್ನು ಸೇರಿಸಿ ಪ್ರತಿನಿತ್ಯ 50 ಸಾವಿರ ವಾಣಿಜ್ಯ ಸಿಲಿಂಡರ್​ಗಳ ಅಗತ್ಯವಿದೆ.  ಆದರೆ ಪ್ರಸ್ತುತ ಕೇವಲ 1 ಸಾವಿರ ಸಿಲಿಂಡರ್​ ಮಾತ್ರ ಪೂರೈಕೆ ಆಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್​ಗಳಿಗೆ ತೀವ್ರ ಅಭಾವ ಉಂಟಾಗಿದ್ದು, ಹೋಟೆಲ್​ ಮತ್ತು ಐಟಿ ಉದ್ಯಮಗಳ ಮೇಲೆ ಗಂಭೀರ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.  ವಾಣಿಜ್ಯ ಸಿಲಿಂಡರ್​ಗಳ ಅಗತ್ಯ ಪೂರೈಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಜನತೆ ಸಂಕಷ್ಟಕ್ಕೆ ಸಿಲುಕಿದ್ದು ಸಿಲಿಂಡರ್​ಗಳ ಪೂರೈಕೆ ಸುಗುಮಗೊಳಿಸುವಂತೆ ಆಗ್ರಹಿಸಿ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದಿಪ್​ ಸಿಂಗ್​ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ಬೇಡಿಕೆ 50 ಸಾವಿರ, ಪೂರೈಕೆ 1 ಸಾವಿರ..!

ಬೆಂಗಳೂರಿನ ಹೋಟೆಲ್​ಗಳು, ರೆಸ್ಟಾರೆಂಟ್​ಗಳು, ಪಿಜಿಗಳು ಹಾಗೂ ಕ್ಯಾಟರಿಂಗ್​ ವ್ಯವಸ್ಥೆಗಳನ್ನು ಸೇರಿಸಿ ಪ್ರತಿನಿತ್ಯ 50 ಸಾವಿರ ವಾಣಿಜ್ಯ ಸಿಲಿಂಡರ್​ಗಳ ಅಗತ್ಯವಿದೆ.  ಆದರೆ ಪ್ರಸ್ತುತ ಕೇವಲ 1 ಸಾವಿರ ಸಿಲಿಂಡರ್​ ಮಾತ್ರ ಪೂರೈಕೆ ಆಗುತ್ತಿದೆ. ಇದರಿಂದಾಗಿ ಹೋಟೆಲ್​ ಉದ್ಯಮ ನೆಲಕಚ್ಚುವ ಭೀತಿಯಲ್ಲಿದ್ದು, ಈಗಾಗಲೇ ಅನೇಕ ಹೋಟೆಲ್​ಗಳು, ಕ್ಯಾಂಟೀನ್​ಗಳು ಮುಚ್ಚುವ ಹಂತ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ .

ಜನಸಾಮಾನ್ಯರಿಗೂ ತಟ್ಟಿದೆ ವಾಣಿಜ್ಯ ಸಿಲಿಂಡರ್ ಅಭಾವದ ಭೀತಿ :

ಇನ್ನು ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದ ಕೇವಲ ಹೋಟೆಲ್​ ಉದ್ಯಮಿಗಳಿಗೆ ಮಾತ್ರ ತೊಂದರೆಯಾಗಿಲ್ಲ, ಹೋಟೆಲ್​ ಆಹಾರವನ್ನೇ ಅವಲಂಬಿಸಿರುವ ಲಕ್ಷಾಂತರ ಜನರಿಗೂ ಸಮಸ್ಯೆಯಾಗುತ್ತಿದೆ. ಪಿಜಿಗಳು ಹಾಗೂ ಹೋಟೆಲ್​ಗಳು ಮುಚ್ಚುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಿಜಿಗಳಲ್ಲಿ ವಾಸವಿರುವ ಐಟಿ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.  ಅಲ್ಲದೇ ಎಲ್​ಪಿಜಿ ಸಿಲಿಂಡರ್​ಗಳನ್ನು ಅವಲಂಬಿಸಿರುವ ಆಟೋ ಚಾಲಕರ ಜೀವನೋಪಾಯಕ್ಕೂ ತೊಂದರೆಯಾಗಿದೆ ಎಂದು ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಕೊರತೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ಎಸ್ಪಿ ಎಚ್ಚರಿಕೆ

ಭಾರತವು 2 ಎಲ್​ಪಿಜಿ ಅನಿಲ ಸಿಲಿಂಡರ್​ಗಳನ್ನು ಸ್ವೀಕರಿಸಲಿದ್ದು ಇದರಿಂದ ಸದ್ಯದ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.  ಹಾಗೂ ಬೆಂಗಳೂರು ನಗರಕ್ಕೆ ಹೆಚ್ಚಿನ ಪಾಲನ್ನು ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories