ಆಟವಾಡುತ್ತಿದ್ದಾಗಲೇ ಕುಸಿದ ಮನೆ ಗೋಡೆ! 8 ವರ್ಷದ ಬಾಲಕಿ ದಾರುಣ ಸಾವು
ಯಾದಗಿರಿ ಜಿಲ್ಲೆಯ ತುಮಕೂರು ಗ್ರಾಮದಲ್ಲಿ ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಆಟವಾಡುತ್ತಿದ್ದ ಬಾಲಕಿ ಮೃತಪಟ್ಟಿದ್ದು, ಇನ್ನಿಬ್ಬರು ಮಕ್ಕಳು ಗಾಯಗೊಂಡ ಘಟನೆ ದುಃಖದ ವಾತಾವರಣ ಸೃಷ್ಟಿಸಿದೆ.

- ಭಾರೀ ಮಳೆಗೆ ಮನೆಯ ಗೋಡೆ ಏಕಾಏಕಿ ಕುಸಿತ
- ಆಟವಾಡುತ್ತಿದ್ದ ಬಾಲಕಿ ಸ್ಥಳದಲ್ಲೇ ದುರ್ಮರಣ
- ಇಬ್ಬರು ಮಕ್ಕಳಿಗೆ ಗಾಯ, ಆಸ್ಪತ್ರೆಗೆ ದಾಖಲು
ಯಾದಗಿರಿ: ವರುಣನ ಅಬ್ಬರ ಯಾದಗಿರಿ ಜಿಲ್ಲೆಯಲ್ಲಿ ಒಂದು ಕುಟುಂಬದ ಬದುಕನ್ನೇ ಕತ್ತಲಲ್ಲಿ ತಳ್ಳಿದೆ. ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಸ್ಥಳೀಯರನ್ನು ಕಂಗಾಲು ಮಾಡಿದೆ.
ಸೋಮವಾರ ಸುರಿದ ಭಾರೀ ಮಳೆಯ ಪರಿಣಾಮ ಸಿದ್ದಪ್ಪ ಎಂಬವರ ಮನೆಯ ಅಡುಗೆ ಕೋಣೆಯ ಗೋಡೆ ಕುಸಿದಿದೆ. ಆ ವೇಳೆ ಮನೆಯ ಅಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದರು. ಗೋಡೆ ಮಕ್ಕಳ ಮೇಲೆಯೇ ಬಿದ್ದ ಪರಿಣಾಮ ಅಕ್ಷತಾ (8) ಎಂಬ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯಲ್ಲಿ ಇನ್ನಿಬ್ಬರು ಮಕ್ಕಳು ಗಾಯಗೊಂಡಿದ್ದು, ತಕ್ಷಣವೇ ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್, ಜಿಪಂ ಸಿಇಒ ಲವೀಶ್ ಒರಡಿಯಾ ಹಾಗೂ ಎಸ್ಪಿ ಪೃಥ್ವಿಕ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬ ಸದಸ್ಯರಿಗೆ ಅಧಿಕಾರಿಗಳು ಸಾಂತ್ವನ ಹೇಳಿ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.
ಭಾರೀ ಮಳೆಯಿಂದ ಹಳೆಯ ಮನೆಗಳಲ್ಲಿ ವಾಸಿಸುವ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಎಚ್ಚರಿಕೆಯಿಂದ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



