ಆಸ್ಪತ್ರೆಯಲ್ಲಿ ಔಷಧ ಸಂಕಷ್ಟ! ಗ್ಯಾರಂಟಿ ಯೋಜನೆಗಳ ನಡುವೆ ಆರೋಗ್ಯ ಸೇವೆ ನಿರ್ಲಕ್ಷ್ಯ ಆರೋಪ

ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧ ಮತ್ತು ಎಕ್ಸ್‌ರೇ ಶೀಟ್ ಕೊರತೆ ತೀವ್ರಗೊಂಡಿದೆ. ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದು, ಆರೋಗ್ಯ ಇಲಾಖೆಯ ಅನುದಾನ ಕಡಿತದ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಹೆಚ್ಚಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ದುಸ್ಥಿತಿ ಇದೀಗ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ದಿನವೂ ನೂರಾರು ಬಡ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರೂ, ಅಗತ್ಯ ಔಷಧಗಳೇ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯಲ್ಲಿ ಸಾಮಾನ್ಯ ಜ್ವರ ಮತ್ತು ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಹೊರತುಪಡಿಸಿದರೆ ಪ್ರಮುಖ ಆಂಟಿಬಯೋಟಿಕ್ ಔಷಧಗಳು ಬಹುತೇಕ ಲಭ್ಯವಿಲ್ಲ ಎನ್ನಲಾಗಿದೆ. ವೈದ್ಯರು ಬರೆದುಕೊಡುವ ಅನೇಕ ಮದ್ದುಗಳು ಆಸ್ಪತ್ರೆಯ ಫಾರ್ಮಸಿಯಲ್ಲಿ ಸಿಗದೇ ರೋಗಿಗಳು ಹೊರಗಿನ ಮೆಡಿಕಲ್ ಅಂಗಡಿಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ.

ಇದರ ಜೊತೆಗೆ ಆಂಟಿಬಯೋಟಿಕ್ ಚುಚ್ಚುಮದ್ದುಗಳ ಕೊರತೆಯೂ ತೀವ್ರವಾಗಿದೆ. ಲಭ್ಯವಿರುವ ಕೆಲವೇ ಇಂಜೆಕ್ಷನ್‌ಗಳಿಂದ ಸಿಬ್ಬಂದಿ ಪರಿಸ್ಥಿತಿಯನ್ನು ನಿಭಾಯಿಸಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಔಷಧ ಸರಬರಾಜಿಗಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲ ಎಂದು ಸಿಬ್ಬಂದಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಮತ್ತೊಂದು ಅವ್ಯವಸ್ಥೆ ರೋಗಿಗಳನ್ನು ಇನ್ನಷ್ಟು ಕಂಗೆಡಿಸಿದೆ. ಎಕ್ಸ್‌ರೇ ಮಾಡಿಸಿದ ಬಳಿಕ ಫಿಲ್ಮ್ ಶೀಟ್ ನೀಡಲು ಆಸ್ಪತ್ರೆಯಲ್ಲಿ ವ್ಯವಸ್ಥೆಯೇ ಇಲ್ಲದಂತಾಗಿದೆ. ಹೀಗಾಗಿ ರೋಗಿಗಳು ತಮ್ಮ ಮೊಬೈಲ್‌ನಲ್ಲಿ ಎಕ್ಸ್‌ರೇ ಚಿತ್ರಗಳನ್ನು ಸೆರೆಹಿಡಿದು ವೈದ್ಯರಿಗೆ ತೋರಿಸುವ ಸ್ಥಿತಿ ಎದುರಾಗಿದೆ.

ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸುವ ಭರದಲ್ಲಿ ಆರೋಗ್ಯ ಇಲಾಖೆಯ ಮೂಲಭೂತ ಅಗತ್ಯಗಳಿಗೆ ಕತ್ತರಿ ಬಿದ್ದಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ. ಸರ್ಕಾರ ತಕ್ಷಣ ಈ ಸಮಸ್ಯೆ ಕಡೆ ಗಮನಹರಿಸಿ ಆಸ್ಪತ್ರೆಗಳಿಗೆ ಅಗತ್ಯ ಔಷಧ ಮತ್ತು ಸೌಲಭ್ಯಗಳನ್ನು ಒದಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories