ಯಕ್ಷಗಾನಕ್ಕೆ ಅಪಚಾರ, ಬಿಳಿಮಲೆ ವಜಾ ಮಾಡಿ : ಮಾಜಿ ಸಚಿವ ಸುನಿಲ್ ಕುಮಾರ್ ಆಗ್ರಹ
ಬೆಂಗಳೂರು : ಯಕ್ಷಗಾನದಲ್ಲಿ ಸಲಿಂಗ ಕಾಮ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ (purushottam bilimale) ಯವರು ಪ್ರತಿಪಾದಿಸಿರುವುದು ಕನ್ನಡದ ಶ್ರೀಮಂತ ಕಲಾಪ್ರಕಾರಕ್ಕೆ ಮಾಡಿದ ಅಪಮಾನವಾಗಿದ್ದು ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕೆಂದು ಕನ್ನಡ ಸಂಸ್ಕ್ರತಿ ಇಲಾಖೆ ಮಾಜಿ ಸಚಿವ ವಿ.ಸುನೀಲ್ ಕುಮಾರ್ (MLA Sunil kumar) ಆಗ್ರಹಿಸಿದ್ದಾರೆ.
ಯಕ್ಷಗಾನ ಒಂದು ದೈವಿಕ ಕಲೆ. ದಕ್ಷಿಣೋತ್ತರ ಕನ್ನಡದ ಸಾವಿರಾರು ಕಲಾವಿದರು ವ್ಯವಸಾಯಿ ಮೇಳ ಹಾಗೂ ಹವ್ಯಾಸಿ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದು, ತಮ್ಮ ಬಿಡುಬೀಸು ಹೇಳಿಕೆಯಿಂದ ಒಂದು ಕಲಾಪ್ರಕಾರವನ್ನೇ ಅಸಹ್ಯವಾಗಿಸುವ ಪ್ರಯತ್ನವನ್ನು ಬಿಳಿಮಲೆ ನಡೆಸಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಯಕ್ಷಗಾನ ಕಲಾವಿದರ ಬಗ್ಗೆ ನಾಲಗೆ ಹರಿಬಿಟ್ಟಿದ್ದ ಪುರುಷೋತ್ತಮ ಬಿಳಿಮಲೆ ಕ್ಷಮೆಯಾಚನೆ
ಈ ಹಿಂದೆ ಹುತಾತ್ಮ ಸೈನಿಕರ ಜಾತಿ ಹುಡುಕಿ ವಿವಾದ ಸೃಷ್ಟಿಸಿದ್ದ ಬಿಳಿಮಲೆಯವರು ಈಗ ಯಕ್ಷಗಾನ ಕಲಾವಿದರ ಬಗ್ಗೆ ಅದೇ ಅಪಸವ್ಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಕ್ಕೆ ಸಾಧ್ಯವಿಲ್ಲ. ಇದು ಇಡಿ ಕಲಾ ಪ್ರಕಾರವನ್ನು ಮುಜುಗರಕ್ಕೆ ದೂಡುವ ಕೃತ್ಯ ಎಂದು ಟೀಕಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಗೌರವಯುತ ಹುದ್ದೆಯಲ್ಲಿ ಇರುವವರು ಇಂತಹ ಹೇಳಿಕೆ ನೀಡುವಾಗ ಸಮಷ್ಠಿ ಜವಾಬ್ದಾರಿ ಪ್ರದರ್ಶಿಸಬೇಕಿತ್ತು. ಸ್ಥಾನ ಗೌರವವನ್ನು ಅರಿಯಬೇಕಿತ್ತು.
ಇದನ್ನೂ ಓದಿ : ಯಕ್ಷಗಾನ ಕಲಾವಿದರು ಸಲಿಂಗ ಕಾಮಿಗಳು : ಸ್ತ್ರೀವೇಷಧಾರಿಗಳ ಮೇಲೆ ಭಾಗವತರ ಸೇಡು, ನಾಲಿಗೆ ಹರಿಬಿಟ್ಟ ಬಿಳಿಮಲೆ
ಆದರೆ ಬಿಳಿಮಲೆಯವರು ತಮ್ಮ ಎಂದಿನ ಮಾತಿನ ಚಪಲ ಪ್ರದರ್ಶಿಸಿದ್ದಾರೆ. ಪುರುಷೋತ್ತಮ ಬಿಳಿಮಲೆ ಅವರ ಈ ಬೇಜವಾಬ್ದಾರಿ ವರ್ತನೆಗಾಗಿ ಸರ್ಕಾರ ಅವರನ್ನು ತಕ್ಷಣ ಪ್ರಾಧಿಕಾರದ ಜವಾಬ್ದಾರಿಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
MLA Sunil kumar Reaction about purushottam bilimale Yakshagana Statement



