ಸರ್ಕಾರಿ ಕಚೇರಿಗಳಲ್ಲಿ ಇನ್ಮುಂದೆ ಕೇವಲ ನಂದಿನಿ ತಿನಿಸು : ಪ್ಲಾಸ್ಟಿಕ್ ಬಾಟಲಿ ಬಳಕೆಯೂ ನಿಷೇಧ
Plastic bottle banned: ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಭೆ ಸಮಾರಂಭಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಕೆ ಮಾಡದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕುಡಿಯುವ ನೀರಿಗಾಗಿ ಬಳಕೆ ಮಾಡುವ ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಪರಿಸರ ಸ್ನೇಹಿ ಪರಿಕರಗಳನ್ನು ಬಳಕೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಇನ್ಮುಂದೆ ಕಟ್ಟುನಿಟ್ಟಾಗಿ ಸರ್ಕಾರದ ಈ ಆದೇಶವನ್ನು ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಪಾಲನೆ ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಇನ್ನು ಇದರ ಜೊತೆಯಲ್ಲಿ ಕರ್ನಾಟಕದ ಹೆಮ್ಮೆಯ ಕೆಎಂಎಫ್ ಬ್ರ್ಯಾಂಡ್ನ ನಂದಿನಿ ಉತ್ಪನ್ನಗಳ ವಿಚಾರವಾಗಿಯೂ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳು ಹಾಗೂ ಇಲಾಖಾ ಸಚಿವರುಗಳ ಸಭೆಯಲ್ಲಿ ಹಾಗೂ ಸಚಿವಾಲಯಗಳೂ ಸೇರಿದಂತೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಎಂಎಫ್(KMF) ಬ್ರ್ಯಾಂಡ್ನ ನಂದಿನಿ ಉತ್ಪನ್ನಗಳನ್ನೇ ಕಡ್ಡಾಯವಾಗಿ ಬಳಕೆ ಮಾಡುವಂತೆ ಆದೇಶ ನೀಡಲಾಗಿದೆ.
Also Read: ಕಿಲ್ಲರ್ ಕಾಂಗ್ರೆಸ್ ಪೋಸ್ಟರ್ : ಸರಕಾರಕ್ಕೆ ಶೋಭಾ ಕರಂದ್ಲಾಜೆ ಟಕ್ಕರ್
ಈ ಆದೇಶ ಪ್ರತಿಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬದಲಾಗಿ ಪರಿಸರ ಸ್ನೇಹಿ ವಸ್ತುಗಳಿಂದ ತಯಾರಿಸಿದ ಪರಿಕರ ಬಳಕೆ ಮಾಡುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಮತ್ತು ಮುಖ್ಯಮಂತ್ರಿಗಳ, ಸಚಿವರುಗಳ ಸಭೆಗಳಲ್ಲಿ, ಸರ್ಕಾರದ ಎಲ್ಲಾ ಸಭೆ – ಕಾರ್ಯಕ್ರಮಗಳಲ್ಲಿ ಸರ್ಕಾರಿ ಸ್ವಾಮ್ಯದ ಕೆಎಂಎಫ್‌ನ ನಂದಿನಿ ತಿನಿಸುಗಳನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ನಂದಿನಿ ಉತ್ಪನ್ನಗಳಿಗೆ ಪ್ರೋತ್ಸಾಹ ಮತ್ತು ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಯಂತ್ರಣಕ್ಕೆ ಮಹತ್ವದ ಕ್ರಮ ಕೈಗೊಂಡಿದೆ.



