ವಿದ್ಯಾರ್ಥಿ ಬಸ್ ಪಾಸ್ ಹಣ ವಾಪಸ್: ಅರ್ಜಿ ಪ್ರಕ್ರಿಯೆ ಆರಂಭ, ಹೀಗೆ ಪಡೆಯಿರಿ ಮರುಪಾವತಿ

ರಾಜ್ಯದ ಉಚಿತ ವಿದ್ಯಾರ್ಥಿ ಬಸ್ ಪಾಸ್ ಯೋಜನೆ ಜಾರಿಯಾದ ಹಿನ್ನೆಲೆ ಈಗಾಗಲೇ ಶುಲ್ಕ ಪಾವತಿಸಿ ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಹಣ ಮರುಪಾವತಿಗೆ ಅವಕಾಶ ನೀಡಲಾಗಿದೆ. ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳಿಗೆ ಘೋಷಿಸಿರುವ ಉಚಿತ ಬಸ್ ಪಾಸ್ ಯೋಜನೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದ ವಿದ್ಯಾರ್ಥಿಗಳಿಗೆ ಮತ್ತೊಂದು ಮಹತ್ವದ ಸೌಲಭ್ಯ ದೊರೆತಿದೆ. ಪಾಸ್‌ಗಾಗಿ ಪಾವತಿಸಿದ ಮೊತ್ತವನ್ನು ಹಿಂತಿರುಗಿಸುವಂತೆ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳು ಆದೇಶ ಹೊರಡಿಸಿವೆ.

KSRTC, BMTC, NWKRTC ಮತ್ತು KKRTC ವ್ಯಾಪ್ತಿಯಲ್ಲಿ ಈಗಾಗಲೇ ಹಣ ನೀಡಿ ವಿದ್ಯಾರ್ಥಿ ಬಸ್ ಪಾಸ್ ಪಡೆದವರು ಸೇವಾಸಿಂಧು (Seva Sindhu) ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಮರುಪಾವತಿ ಪಡೆಯಬಹುದು. ಅರ್ಜಿ ಪರಿಶೀಲನೆ ಪೂರ್ಣಗೊಂಡ ಬಳಿಕ ವಿದ್ಯಾರ್ಥಿಗಳು ನೀಡಿರುವ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ಜಮೆ ಮಾಡಲಾಗುತ್ತದೆ.

ಹಣ ವಾಪಸ್ ಪಡೆಯಲು ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ OTP ಮೂಲಕ ನೋಂದಣಿ ಮಾಡಿಕೊಂಡು ಅಗತ್ಯ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಬೇಕು. ಅರ್ಜಿ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಸುಮಾರು ಏಳು ದಿನಗಳೊಳಗೆ NEFT ಅಥವಾ RTGS ಮೂಲಕ ಹಣ ಜಮೆಯಾಗಲಿದೆ.

ರಾಜ್ಯದ ಗಡಿಭಾಗದಲ್ಲಿ ವಾಸಿಸಿ ನೆರೆಯ ರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ನೆರೆಯ ರಾಜ್ಯಗಳಲ್ಲಿ ವಾಸವಿದ್ದು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಈ ಯೋಜನೆಯ ಲಾಭ ದೊರೆಯಲಿದೆ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.

ಉಚಿತ ವಿದ್ಯಾರ್ಥಿ ಬಸ್ ಪಾಸ್ ಯೋಜನೆ ಜಾರಿಗೆ ಬಂದಿರುವುದರಿಂದ ಈಗಾಗಲೇ ರಿಯಾಯಿತಿ ದರದಲ್ಲಿ ವಿತರಿಸಲಾಗಿದ್ದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ಬಸ್ ಪಾಸ್ ಮೊತ್ತವನ್ನು ಸಂಪೂರ್ಣವಾಗಿ ಮರುಪಾವತಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಭರಿಸಲಿದೆ.

ರಾಜ್ಯದ ಎಲ್ಲಾ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆ ಜಾರಿಗೆ ಬಂದಿರುವುದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಪ್ರತಿದಿನದ ಪ್ರಯಾಣ ವೆಚ್ಚದ ಹೊರೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »

Related Stories